ಅಮೆರಿಕ, ಆ. 23: ಇಲ್ಲಿನ ಟೆನ್ನೆಸ್ಸಿ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗಿ, ಕನಿಷ್ಠ 22 ಮಂದಿ ಮೃತಪಟ್ಟಿದ್ದು, ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ.
‘ಟೆನ್ನೆಸ್ಸಿಯಲ್ಲಿ ಇದುವರೆಗೆ ಒಂದು ದಿನದಲ್ಲಿ ಸುರಿದ ಮಳೆಯ ದಾಖಲೆ ಪ್ರಮಾಣ 14 ಇಂಚುಗಳಷ್ಟು. ಆದರೆ ಈ ಬಾರಿ 17 ಇಂಚುಗಳಷ್ಟು ಮಳೆ ಸುರಿದಿದ್ದು, ಇದರಿಂದಾಗಿ ಹಠಾತ್ ಪ್ರವಾಹ ಉಂಟಾಗಿ ಇಷ್ಟು ದೊಡ್ಡ ಅನಾಹುತ ಎದುರಾಗಿದೆ’ ಎಂದು ತುರ್ತು ನಿರ್ವಹಣಾ ನಿರ್ದೇಶಕ ಪ್ಯಾಟ್ರಿಕ್ ಶೀಹೆನ್ ಹೇಳಿದ್ದಾರೆ.
ಪ್ರವಾಹದಿಂದಾಗಿ ರಸ್ತೆಗಳು ಕೊಚ್ಚಿಕೊಂಡು ಹೋಗಿದ್ದು, ಮೊಬೈಲ್ ಟವರ್ ಗಳು, ದೂರವಾಣಿ ತಂತಿಗಳು ತುಂಡಾಗಿವೆ. ಹೀಗಾಗಿ ನಾಪತ್ತೆಯಾದವರು ಎಲ್ಲಿದ್ದಾರೆ ಎಂಬುದನ್ನು ಕುಟುಂಬದ ಇತರ ಸದಸ್ಯರಿಗೆ ತಿಳಿಯುವುದು ಕಷ್ಟವಾಗಿದೆ.