ನ್ಯೂಯಾರ್ಕ್, ಡಿ. 10: ವಿಪರ್ಯಾಸವೆಂದರೆ ಕರ್ನಾಟಕದಲ್ಲಿ ಅನೇಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ನೆಪವೊಡ್ಡಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿವೆ. ಆದರೆ ದೂರದ ಅಮೆರಿಕಾದ ಸರ್ಕಾರಿ ಹೈಸ್ಕೂಲುಗಳಲ್ಲಿ ಕನ್ನಡ ಭಾಷೆಯನ್ನು ಅಧಿಕೃತ ವಿದೇಶಿ ಭಾಷೆಯಾಗಿ ಕಲಿಸುವ ಸುವರ್ಣ ಅವಕಾಶ ದೊರೆತಿರುವುದು ಸಂತೋಷದ ಸಂಗತಿ.
ಅಮೆರಿಕದಲ್ಲಿ ಕನ್ನಡ ಪ್ರೇಮಿಗಳ ಸತತ 15 ವರ್ಷಗಳ ಪ್ರಯತ್ನದಿಂದಾಗಿ, ಮೊಟ್ಟಮೊದಲ ಬಾರಿಗೆ, ನಾರ್ತ್ ಕ್ಯಾರೊಲಿನ ರಾಜ್ಯದ ವೇಕ್ ಕೌಂಟಿ ಸರ್ಕಾರಿ ಹೈಸ್ಕೂಲಿನಲ್ಲಿ ಕನ್ನಡವನ್ನು ಒಂದು ವಿದೇಶಿ ಭಾಷೆಯಾಗಿ ಕಲಿಯಲು ಅವಕಾಶ ದೊರೆತಿದೆ.
ಯಾವಾಗಲೂ ಮೊಟ್ಟಮೊದಲನೆಯ ಕೆಲಸ ತುಂಬಾ ಕಷ್ಟಕರ. ನಂತರ ಇದನ್ನು ವಿಸ್ತರಣೆ ಮಾಡುವುದು ಸುಲಭ. ಅಮೆರಿಕ ಬಹುದೊಡ್ಡ ದೇಶವಾಗಿದ್ದು, ಇಲ್ಲಿಯ ಬಹಳಷ್ಟು ದೊಡ್ಡ ಊರುಗಳಲ್ಲಿರುವ ಹೈಸ್ಕೂಲುಗಳಲ್ಲಿ ಕನ್ನಡ ಭಾಷೆಯನ್ನು ವಿದೇಶಿ ಭಾಷೆಯಾಗಿ ಕಲಿಸಲು ಮುಂಬರುವ ದಿನಗಳಲ್ಲಿ ಕನ್ನಡ ಅಕಾಡೆಮಿ ಪ್ರಯತ್ನ ಮಾಡಲಿದೆ.