ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಸಂಸದ ಅಸಾದುದ್ದೀನ್ ಓವೈಸಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಬಳಿಕ, ಒವೈಸಿ ಅವರಿಗೆ ಕೇಂದ್ರ ಸರ್ಕಾರ ಝಡ್ ಶ್ರೇಣಿಯ ಭದ್ರತೆ ನೀಡಲು ಮುಂದಾಗಿದೆ. ಆದರೆ ಓವೈಸಿ ಕೇಂದ್ರ ಸರ್ಕಾರದಿಂದ ಭದ್ರತಾ ಸವಲತ್ತು ಪಡೆಯಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಭದ್ರತೆ ಕುರಿತು ಕೇಂದ್ರ ಗೃಹ ಸಚಿವ ಮಾತನಾಡಿದ್ದು, ಓವೈಸಿ ಅವರ ಜೀವಕ್ಕೆ ಅಪಾಯವಿದೆ ಎಂಬುದನ್ನು ನಮ್ಮ ಸರ್ಕಾರ ಮನಗಂಡಿದೆ. ಈ ದೃಷ್ಟಿಯಿಂದ ಅವರಿಗೆ ಝಡ್ ಶ್ರೇಣಿಯ ಭದ್ರತೆ ನೀಡಲು ನಾವು ಸಿದ್ಧರಿದ್ದೇವೆ. ಆದರೆ ಒವೈಸಿ ಭದ್ರತೆ ಪಡೆದುಕೊಳ್ಳಲು ನಿರಾಕರಿಸಿದ್ದಾರೆ.
ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾನು ಅವರಲ್ಲಿ ಮಾಡುತ್ತೇನೆ ಎಂದು ಹೇಳಿದರು. ನಾವು ಓವೈಸಿ ಅವರಿಗೆ ಝಡ್ ಶ್ರೇಣಿಯ ಬುಲೆಟ್ ಪ್ರೂಫ್ ಕಾರನ್ನು ನೀಡಲು ಸಿದ್ಧರಿದ್ದೇವೆ. ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ಭದ್ರತೆಯನ್ನು ಪಡೆದುಕೊಳ್ಳಬೇಕು ಎಂದು ಅಮಿತ್ ಶಾ ಒವೈಸಿ ಅವರಿಗೆ ಮನವಿ ಮಾಡಿದರು. ಓವೈಸಿ ಅವರ ಕಾರಿನ ಮೇಲಿನ ಪ್ರಕರಣಕ್ಕೆ ಸಂಬಂಧಿಸಿಂತೆ ಉತ್ತರ ಪ್ರದೇಶ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಪಿಸ್ತೂಲುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಂದು ಕಾರನ್ನು ಕೂಡ ಸುಪರ್ದಿಗೆ ಪಡೆಯಲಾಗಿದೆ.

ಬಂಧಿತರನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ. ವಿಚಾರಣೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದು ಅಮಿತ್ ಶಾ ಲೋಕಸಭೆಗೆ ಮಾಹಿತಿ ನೀಡಿದರು. ಇನ್ನು ಓವೈಸಿ ಅವರು ತೆರಳುವ ಮಾರ್ಗದ ಬಗ್ಗೆ ಪೊಲೀಸರಿಗೆ ಮೊದಲೇ ಮಾಹಿತಿ ನೀಡಿರಲಿಲ್ಲ. ಇದು ಕೂಡ ಅವರ ಮೇಲೆ ಸುಲಭವಾಗಿ ದಾಳಿ ನಡೆಸಲು ಅನುವು ಮಾಡಿಕೊಟ್ಟಿತು. ಸಂಸದರು ತಮ್ಮ ಪೂರ್ವನಿಗದಿತ ಕಾರ್ಯಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡುವುದಾಗಿ ಅಮಿತ್ ಶಾ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ : ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿರುವ ಅಸಾದುದ್ದೀನ್ ಓವೈಸಿ, ಇತ್ತೀಚೆಗೆ ಉತ್ತರಪ್ರದೇಶದ ಮೀರತ್ ನಿಂದ ದೆಹಲಿಗೆ ತೆರಳುವ ವೇಳೆ ಟೋಲ್ ಪ್ಲಾಜಾ ಬಳಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. 3-4 ಸುತ್ತು ಗುಂಡಿನ ದಾಳಿ ನಡೆದರೂ, ಓವೈಸಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು.