ಮುಂಬೈ,ಜೂ.24: ಬಾಲಿವುಡ್ ಬಿಗ್-ಬಿ ಅಮಿತಾಭ್ ಬಚ್ಚನ್ ಮುಂಬೈನ ಆಸ್ಪತ್ರೆಯೊಂದಕ್ಕೆ ಅತ್ಯಾಧುನಿ ಸೌಲಭ್ಯವುಳ್ಳ ವೈದ್ಯಕೀಯ ಸಲಕರಣೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಸಾಕಷ್ಟು ನೆರವು ನೀಡಿರುವ ಅವರು ಮುಂಬೈನ ಸಿಯಾನ್ ಆಸ್ಪತ್ರೆಗೆ ಕ್ಲಾಸ್-1 ದರ್ಜೆಯ ಎರಡು ತೀವ್ರ ನಿಗಾ ಘಟಕದ ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಎರಡು ವೆಂಟಿಲೇಟರ್ ಗಳು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ನೆರವಾಗಲಿದೆ.
ಸಿಯಾನ್ ಆಸ್ಪತ್ರೆಗೆ ಈಗಾಗಲೇ ವೆಂಟಿಲೇಟರ್ ಗಳಿಗೆ ಬಳಸುವ ಮಾನಿಟರ್ಸ್, ಸಿ.ಆರ್.ಎಂ ಇಮೇಜ್ ಇನ್ಟೆನ್ಸಿಫೈಯರ್ಸ್, ಇನ್ಫೂಷನ್ಸ್ ಪಂಪ್ಸ್ ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳನ್ನು ಕಲ್ಪಿಸಲಾಗಿದೆ. ಇವುಗಳ ಮೌಲ್ಯ 2 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಕ್ಕೆ ಸಿಯಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಮೋಹನ್ ಜೋಶಿ, ಕೃತಜ್ಞತೆ ತಿಳಿಸಿದ್ದಾರೆ.
ಈ ಎರಡು ವೆಂಟಿಲೇಟರ್‌ಗಳನ್ನ ಆಸ್ಪತ್ರೆ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಬಳಕೆ ಮಾಡಲಿದ್ದು, ಎರಡು ಹೊಸ ವೆಂಟಿಲೇಟರ್‌ಗಳೊಂದಿಗೆ ಸುಮಾರು 30 ರೋಗಿಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು ಎಂದು ಆಸ್ಪತ್ರೆ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದು, ಸಂಪೂರ್ಣವಾಗಿ ಕಂಪ್ಯೂಟರೀಕರಣವಾಗಿರುವ ವೆಂಟಿಲೇಟರ್ ಗಳ ಮೂಲಕ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ನಿಖರವಾದ ಆಕ್ಸಿಜನ್ ಒದಗಿಸಲಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮೋಹನ್ ಜೋಶಿ ಮಾಹಿತಿ ನೀಡಿದ್ದಾರೆ.