- ಮಕ್ಕಳನ್ನು ಕಾಡುತ್ತಿರುವ (Anemia increasing in children) ರಕ್ತಹೀನತೆ
- ಶಾಕ್ ಆಗುವಂತಿದೆ ಧಾರವಾಡ ಆರೋಗ್ಯ ಇಲಾಖೆ ಬಿಚ್ಚಿಟ್ಟ ಅಂಕಿ ಅಂಶಗಳು
- 1,80,000ಕ್ಕೂ ಹೆಚ್ಚು ಮಕ್ಕಳ ತಪಾಸಣೆಯಲ್ಲಿ ಅಲ್ಪ, ಮಧ್ಯಮ ಮತ್ತು ತೀವ್ರ ರಕ್ತಹೀನತೆ ಪ್ರಕರಣಗಳು ಪತ್ತೆ
Dharwad: ಸರ್ಕಾರ ಮಕ್ಕಳನ್ನು ಅಪೌಷ್ಟಿಕತೆ ಸಮಸ್ಯೆಯಿಂದ ಪಾರು (Anemia increasing in children) ಮಾಡಿ ಉತ್ತಮ
ಆರೋಗ್ಯವಂತ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ.
ಆದರೂ ಕೂಡ ಅದರ ಪ್ರಯೋಜನ ಪಡೆಯಲು ಸಾಧ್ಯವಾಗದೇ ಅನೇಕ ಕಡೆಗಳಲ್ಲಿ ಮಕ್ಕಳು ನಾನಾ ಸಮಸ್ಯೆಯಿಂದ ಬಳಲುತ್ತಲೇ ಇದ್ದಾರೆ.

ಇದಕ್ಕೆ ಧಾರವಾಡ ಜಿಲ್ಲೆಯೂ ಕೂಡ ಹೊರತಾಗಿಲ್ಲ.ಧಾರವಾಡ ಜಿಲ್ಲೆಯಲ್ಲಿ (Anemia increasing in children) ಮಕ್ಕಳ ಆರೋಗ್ಯದ ಸ್ಥಿತಿ ಗಂಭೀರವಾಗುತ್ತಿದೆ ಎಂಬುದು ಇತ್ತೀಚಿನ ಆರೋಗ್ಯ ತಪಾಸಣೆಯಿಂದ ಹೊರಬಂದಿದೆ.
ಸರ್ಕಾರ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರೂ, ಅವುಗಳ ಫಲಿತಾಂಶ ಮಾತ್ರ ಹೇಳಿಕೊಳ್ಳುವ ಹಾಗಿಲ್ಲ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ .
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ (RBSK) ಅಡಿಯಲ್ಲಿ ನಡೆಸುವ ವಾರ್ಷಿಕ ತಪಾಸಣೆ ವೇಳೆ, ಜಿಲ್ಲೆಯ ಸಾವಿರಾರು ಮಕ್ಕಳು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 1 ರಿಂದ 14 ವರ್ಷದೊಳಗಿನ 58,159 ಮಕ್ಕಳು ಅನಿಮಿಯಾದಿಂದ
ಬಳಲುತ್ತಿದ್ದಾರೆ, ಇದು ಜಿಲ್ಲೆಯ ಆರೋಗ್ಯ ಪರಿಸ್ಥಿತಿಗೆ ಒಂದು ದೊಡ್ಡ ಎಚ್ಚರಿಕೆ ಗಂಟೆಯಂತಿದೆ.
ಈ ಯೋಜನೆ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳಲ್ಲಿ ಪ್ರತಿ ವರ್ಷ ಎರಡುಬಾರಿ ಮಕ್ಕಳ ಸಂಪೂರ್ಣ ಆರೋಗ್ಯ ತಪಾಸಣೆ ನಡೆಯುತ್ತದೆ.
ಈ ವರ್ಷ ಒಟ್ಟು 1,80,882 ಮಕ್ಕಳ ತಪಾಸಣೆ ನಡೆಸಲಾಗಿದ್ದು, ಅದರಲ್ಲೂ 30,598 ಮಕ್ಕಳಲ್ಲಿ ಸೌಮ್ಯ ರಕ್ತಹೀನತೆ, 27,282 ಮಕ್ಕಳಲ್ಲಿ ಮಧ್ಯಮ ಮಟ್ಟದ ರಕ್ತಹೀನತೆ ಮತ್ತು 279 ಮಕ್ಕಳಲ್ಲಿ ತೀವ್ರ ರಕ್ತಹೀನತೆ ಇರುವುದನ್ನು ತಜ್ಞರು ಗುರುತಿಸಿದ್ದಾರೆ.
ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ, ಸರಿಯಾದ ಸಮಯಕ್ಕೆ ಊಟ ಮಾಡದ ಪ್ರವೃತ್ತಿ, ಜಂಕ್ ಫುಡ್ ಸೇವನೆ ಹಾಗೂ ಮಕ್ಕಳಲ್ಲಿ ಕಾಣಿಸಿಕೊಂಡಿರುವ ಅಭ್ಯಾಸದ ಬದಲಾವಣೆಗಳು ಈ ಅಘಾತಕಾರಿ ಪರಿಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ ಎಂದು ವೈದ್ಯರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ರಕ್ತಹೀನತೆಯಹಲವು ರೀತಿಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.
ಅನಿಮಿಯಾ ಇರುವ ಮಕ್ಕಳು ಸಾಮಾನ್ಯವಾಗಿ ದೌರ್ಬಲ್ಯ, ದೈಹಿಕ ಮತ್ತು ಮಾನಸಿಕ ಆಯಾಸ, ಏಕಾಗ್ರತೆಯ ಕೊರತೆ ಮತ್ತು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವ ಲಕ್ಷಣಗಳನ್ನು ತೋರಿಸುತ್ತಾರೆ.
ಇದರಿಂದ ಅವರ ಶಾಲಾ ಸಾಧನೆ ಕುಸಿಯುವುದು, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅಸಮರ್ಥರಾಗುವುದು, ದೈಹಿಕ ಬೆಳವಣಿಗೆಯಲ್ಲೂ ವ್ಯತ್ಯಾಸ ಉಂಟಾಗುವುದು ಕಂಡುಬರುತ್ತಿದೆ.
ಕೆಲವು ಮಕ್ಕಳಲ್ಲಿ ಜೆನೆಟಿಕ್ ಕಾರಣದಿಂದಲೂ ರಕ್ತಹೀನತೆ ಕಾಣಿಸಿಕೊಂಡಿದ್ದು, ಇವು ವೈದ್ಯಕೀಯ ಅವಶ್ಯಕತೆಯನ್ನು ಹೆಚ್ಚಿಸುತ್ತಿವೆ.
ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಮಾತ್ರವಲ್ಲ, ಪೋಷಕರು ಸಹ ಮಕ್ಕಳ ಆಹಾರ ಕ್ರಮ, ನಿದ್ರೆ ಪದ್ಧತಿ ಮತ್ತು ದೈನಂದಿನ ಜೀವನಶೈಲಿಯಲ್ಲಿ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಮೊಬೈಲ್ ವ್ಯಸನ ಮತ್ತೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಅಳುವ ಮಗು ತಕ್ಷಣ ಶಾಂತವಾಗಲಿ ಎಂದು ಮೊಬೈಲ್ ನೀಡುವುದು, ಊಟ ಮಾಡುವಾಗ ಫೋನ್ ನೋಡಿಸುವುದು, ಆಟದ ಸಮಯದಲ್ಲೂ ಟಿವಿ , ಮೊಬೈಲ್ ಮೊರೆ ಹೋಗುವುದು ಇವುಗಳೆಲ್ಲ ಮಕ್ಕಳ ಆರೋಗ್ಯ ಮೇಲೆ ನೇರ ಪರಿಣಾಮ ಬೀರುತ್ತಿವೆ.
ಶಾರೀರಿಕ ಚಟುವಟಿಕೆ ಕಡಿಮೆ ಆಗುತ್ತದೆ, ಹಸಿವು ಸರಿಯಾಗಿ ಅರಿವಾಗುವುದಿಲ್ಲ, ಪರಿಣಾಮವಾಗಿ ಸಮತೋಲನ ಆಹಾರ ಸೇವನೆ ಕಡಿಮೆಯಾಗುತ್ತದೆ.
ಇದರಿಂದ ಕೇವಲ ರಕ್ತಹೀನತೆ ಮಾತ್ರವಲ್ಲದೆ, ಪೋಷಕಾಂಶಗಳ ಕೊರತೆ, ಕುಂದು ಬೆಳವಣಿಗೆ ಮತ್ತು ದೈಹಿಕ ತೊಂದರೆಗಳು ಹೆಚ್ಚುತ್ತಿವೆ.
ಆರೋಗ್ಯ ತಜ್ಞರ ಪ್ರಕಾರ, ಮಕ್ಕಳ ಆರೋಗ್ಯದ ರಕ್ಷಣೆಗೆ ಸರ್ಕಾರದ ಯೋಜನೆಗಳ ಜೊತೆಗೆ ಮನೆಯಲ್ಲಿಯೇ ಸರಿಯಾದ ಆಹಾರ ಸಂಸ್ಕೃತಿ ನಿರ್ಮಾಣ, ಜಂಕ್ ಫುಡ್‌ನ ನಿಷೇಧ, ಹೊರ ಆಟಗಳಿಗೆ ಉತ್ತೇಜನ ಮತ್ತು ಪರದೆ ಬಳಕೆಯ ನಿಯಂತ್ರಣ ಅಗತ್ಯವಾಗಿದೆ.
ಈ ಎಲ್ಲವನ್ನು ಸಮರ್ಪಕವಾಗಿ ಅನುಸರಿಸಿದಾಗ ಮಾತ್ರ ಮಕ್ಕಳನ್ನು ರಕ್ತಹೀನತೆಯಂತಹ ಗಂಭೀರ ಸಮಸ್ಯೆಗಳಿಂದ ರಕ್ಷಿಸುವುದು ಸಾಧ್ಯ ಎಂದು ವೈದರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಇಷ್ಟರ ಮಟ್ಟಿಗೆ ಕೊರೊನಾ ಸೋಂಕು ಹರಡಲು ಕಾರಣ ಏನು ಗೊತ್ತಾ? ಬಯಲಾಯಿತು ಸರ್ಕಾರದ ನಿರ್ಲಕ್ಷ್ಯ