ಪುರಿ ದೇವಾಲಯವು(Puri Jaganath Temple) ಪ್ರಮುಖವಾಗಿ ವಾರ್ಷಿಕ ರಥಯಾತ್ರೆ ಅಥವಾ ರಥೋತ್ಸವಕ್ಕೆ ಹೆಸರುವಾಸಿಯಾಗಿದೆ. ಈ ರಥೋತ್ಸವದಲ್ಲಿ ಮೂರು ಪ್ರಮುಖ ದೇವತೆಗಳನ್ನು ಬೃಹತ್ ಮತ್ತು ವಿಸ್ತಾರವಾಗಿ ಅಲಂಕರಿಸಿದ ದೇವಾಲಯದ ರಥಗಳ ಮೇಲೆ ಕೂರಿಸಲಾಗುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಜನಸಾಗರವೇ ಹರಿದು ಬರುತ್ತದೆ. ಆದರೆ, 2020ನೇ ವರ್ಷದಲ್ಲಿ ಜೂನ್ 23ರಂದು ನಡೆದ ಉತ್ಸವದಲ್ಲಿ ಕೊರೋನ ಕಾರಣದಿಂದ ಮೊಟ್ಟ ಮೊದಲ ಬಾರಿಗೆ ಭಕ್ತ ಸಮೂಹವಿಲ್ಲದೇ ರಥೋತ್ಸವ ಮಾಡಲಾಗಿತ್ತು.
ಸುಪ್ರೀಂ ಕೋರ್ಟ್(Supremecourt) ಅಣತಿ ಮೇರೆಗೆ ದೇಗುಲಕ್ಕೆ ಸೇರಿದವರನ್ನೂ ಸೇರಿಸಿ ಒಟ್ಟು 500 ಜನರಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಆ ಸಂದರ್ಭದಲ್ಲಿ ನೆರೆದಿದ್ದ ಕನಿಷ್ಟ ಜನರ ಪೈಕಿ ರಥ ಎಳೆಯಲು ಕೈ ಜೋಡಿಸಿದ್ದ ಇಬ್ಬರು ಸಹೋದರರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದರು. ಅದಕ್ಕೆ ಕಾರಣ ಅವರ ಕಟ್ಟುಮಸ್ತಾದ ದೇಹ. ಹೌದು, ಸಹೋದರರಾದ ಅನಿಲ್ ಗೋಚಿಕರ್(Anil Gochikar) ಹಾಗೂ ದಾಮೋದರ್ ಗೋಚಿಕರ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು.

ಇವರಿಬ್ಬರನ್ನೂ ಪುರಿಯ ಬಾಹುಬಲಿಗಳು ಎಂದೇ ವರ್ಣಿಸಲಾಗಿತ್ತು. ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟುವಾದ ಅನಿಲ್ ಗೋಚಿಕರ್, 2019 ರಲ್ಲಿಯೂ ಪುರಿ ಜಗನ್ನಾಥನ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ವೇಳೆಯಲ್ಲಿ ಗಮನ ಸೆಳೆದಿದ್ದರು. ಆರಂಭದಲ್ಲಿ ಸಹೋದರ ದಾಮೋದರ್ ಗೋಚಿಕರ್ ಅವರಿಂದ ಪ್ರೇರಿತರಾಗಿದ್ದ ಅನಿಲ್ ಗೋಚಿಕರ್ ಸುಮಾರು ಹತ್ತು ವರ್ಷಗಳ ಹಿಂದೆ ಕಟ್ಟುಮಸ್ತಾದ ದೇಹ ಬೆಳೆಸಬೇಕೆಂದು ಯೋಚಿಸಿ ಅದರತ್ತ ಗಮನ ಹರಿಸಿದ್ದರು. ಅದರ ಫಲವಾಗಿ ಅನೇಕ ಬಾರಿ “ಮಿಸ್ಟರ್ ಒಡಿಶಾ” ಪದಕವನ್ನು ಬಾಚಿಕೊಂಡ ಅವರು,
2012 ರಲ್ಲಿ ಮಿಸ್ಟರ್ ಇಂಡಿಯಾ ಪಟ್ಟವನ್ನೂ ತಮ್ಮದಾಗಿಸಿಕೊಂಡಿದ್ದರು ಹಾಗೂ 2016 ರಲ್ಲಿ ದುಬೈನಲ್ಲಿ ನಡೆದ ಸ್ಪರ್ಧೆಯಲ್ಲಿ “ಮಿಸ್ಟರ್ ಇಂಟರ್ನ್ಯಾಶನಲ್ ಇಂಡಿಯನ್” ಎಂಬ ಪಟ್ಟವನ್ನೂ ಅಲಂಕರಿಸಿದ್ದರು. ಹೀಗೆ ವಿವಿಧ ಪಟ್ಟಗಳಿಗೆ ಭಾಜನರಾದ ಅನಿಲ್ಗೆ ರಥೋತ್ಸವದಲ್ಲಿ ರಥ ಎಳೆಯುವುದು ಏಕೆ ಇಷ್ಟ ಎಂದು ಕೇಳಿದ್ದಕ್ಕೆ, ದೇವರ ಸೇವೆ ಮಾಡದಿದ್ದರೆ ಎಷ್ಟು ದೇಹ ಬೆಳೆಸಿದರೆ ಏನು ಪ್ರಯೋಜನ ಎಂದು ಉತ್ತರಿಸಿದ್ದರು. ಇಂತಹ ದೈವಭಕ್ತ ದೇಹದಾರ್ಢ್ಯ ಪಟು ಅನಿಲ್ ಗೋಚಿಕರ್ ಅಪ್ಪಟ ಸಸ್ಯಾಹಾರಿ ಎನ್ನುವುದು ಇನ್ನೊಂದು ವಿಶೇಷ.

ಮೊಟ್ಟೆಯನ್ನೂ ತಿನ್ನದ ಅವರು ಮದ್ಯಪಾನವನ್ನಾಗಲೀ, ಧೂಮಪಾನ ಸೇವನೆಯನ್ನಾಗಲೀ ಮಾಡುವುದಿಲ್ಲವಂತೆ. ಕೇವಲ ಶುದ್ಧ ಸಸ್ಯಾಹಾರ ಪದ್ಧತಿಯನ್ನೇ ಪಾಲಿಸಿಕೊಂಡು ದೇಹ ಧಾರ್ಡ್ಯವನ್ನು ಕಾಪಾಡಿಕೊಂಡಿದ್ದಾರೆ. ಈ ವಿಚಾರವೇ ಅನೇಕರಲ್ಲಿ ಬೆರಗು ಮೂಡಿಸಿದ್ದು, ಶುದ್ಧ ಸಸ್ಯಾಹಾರಿಗಳೂ ಕೂಡ ಹೀಗೆ ಕಟ್ಟುಮಸ್ತಾದ ದೇಹ ಬೆಳೆಸಲು ಸಾಧ್ಯವೇ ಎಂದು ಬೆರಗಾಗಿದ್ದಾರೆ.
- ಪವಿತ್ರ