ಚಂಡೀಗಢ, ಡಿ. 16: ಕೊರೋನಾ ಸೋಂಕಿತರಾಗಿರುವ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಗಾಗಿ ಗುರುಗ್ರಾಮದ ಮೇದಾಂತ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೇದಾಂತ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ನಿರ್ದೇಶಕರಾದ ಡಾ.ಸುಶೀಲಾ ಕಟಾರಿಯಾ ಅವರು ಅನಿಲ್ ವಿಜ್ಗೆ ಚಿಕಿತ್ಸೆ ನೀಡುತ್ತಿದ್ದು, ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಇನ್ನೂ ಆಸ್ಪತ್ರೆಯಿಂದ ಯಾವುದೇ ನಿಖರ ಮಾಹಿತಿ ದೊರೆತಿಲ್ಲ. ಅನಿಲ್ ವಿಜ್ ಮಂಗಳವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅನಿಲ್ ವಿಜ್ ಅವರಿಗೆ ಕೊರೋನಾ ಜೊತೆಗೆ ವೈರಲ್ ನ್ಯುಮೋನಿಯಾ ಕೂಡ ಇದೆ ಎಂದು ಆರೋಗ್ಯ ವಿಜ್ಞಾನಗಳ ಸ್ನಾತಕೋತ್ತರ ಕೇಂದ್ರ ಹೇಳಿಕೆ ನೀಡಿತ್ತು. ಆರೋಗ್ಯ ಸುಧಾರಿಸದ ಹಿನ್ನೆಲೆ ಸಚಿವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.