Central government agrees to give rice to Annabhagya Yojana: 10 kg free rice will be available from now on
Bengaluru: ನೀ ಕೊಡೆ ನಾ ಬಿಡೆ,ಎನ್ನುವಂತೆ ಅನ್ನಭಾಗ್ಯ ಯೋಜನೆಗೆ (Annabhagya Scheme) ಅಕ್ಕಿ ನೀಡಬೇಕೆಂಬ ರಾಜ್ಯ ಸರ್ಕಾರದ ಮನವಿಯನ್ನು ಕಳೆದ ವರ್ಷ ಕೇಂದ್ರ ತಿರಸ್ಕರಿಸಿತ್ತು. ಇದು ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಬದಲು ಅದರ ಹಣವನ್ನು ಸರ್ಕಾರ ಫಲಾನುಭವಿಗಳಿಗೆ ನೀಡುತ್ತ ಬಂದಿತ್ತು.
ತಲಾ ಒಂದು ಕೆಜಿಗೆ 34 ರೂಪಾಯಿಯಂತೆ 170 ರೂಪಾಯಿಯನ್ನು ಖಾತೆಗೆ ಜಮಾ ಮಾಡುತ್ತಿತ್ತು.ಒಂದು ಕುಟುಂಬ ಯಜಮಾನರ ಖಾತೆಗೆ ಸದಸ್ಯರ ಅಕ್ಕಿ ಹಣವನ್ನು ನೀಡುತ್ತಿತ್ತು.ಇದೀಗ ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (BPL) ಕಾರ್ಡುದಾರರಿಗೆ ಉಚಿತ ಅಕ್ಕಿ ನೀಡುವುದಕ್ಕಾಗಿ ಕರ್ನಾಟಕಕ್ಕೆ ಅಕ್ಕಿ ಪೂರೈಸಲು ಸಿದ್ಧವಿದೆ ಎಂದು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ.
ಅಕ್ಕಿ ಪೂರೈಸುವ ಬಗ್ಗೆ ಭಾರತೀಯ ಆಹಾರ ನಿಗಮ (FCI) ಈಗಾಗಲೇ ಘೋಷಣೆ ಮಾಡಿದೆ. ಹೀಗಾಗಿ ಫಲಾನುಭವಿಗಳಿಗೆ ಇನ್ನು ಮುಂದೆ ರಾಜ್ಯ ಸರ್ಕಾರ ನೀಡುತ್ತಿರುವ 170 ರೂಪಾಯಿಗಳ ಬದಲಿಗೆ 5 ಕೆಜಿ ಅಕ್ಕಿ ಹೆಚ್ಚು ಸಿಗುವ ಸಾಧ್ಯತೆಯಿದೆ. ಇನ್ನು ಕಳೆದ ವರ್ಷ ಮುಂಗಾರು ಮಳೆಯ ಕೊರತೆಯು ಅಕ್ಕಿ ದಾಸ್ತಾನಿನ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ ದೇಶೀಐ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಸ್ಥಗಿತಗೊಳಿಸಲಾಗಿತ್ತು.
ಆ ಕಾರಣದಿಂದ ರಾಜ್ಯ ಸರ್ಕಾರದ ಮನವಿಯನ್ನು ಪರಿಗಣಿಸಿರಲಿಲ್ಲ. ಈ ವರ್ಷ ಉತ್ತಮ ಮಳೆಯಾಗಿದ್ದು, ಎಫ್ಸಿಐ (ಕರ್ನಾಟಕ ವಿಭಾಗ) 7.42 ಲಕ್ಷ ಟನ್ ಅಕ್ಕಿ ದಾಸ್ತಾನು ಹೊಂದಿದ್ದು, 2025 ರ ಮಾರ್ಚ್ (March) ವರೆಗೆ ಕೆಜಿಗೆ 28 ರೂ.ನಂತೆ ರಾಜ್ಯಕ್ಕೆ ಪೂರೈಸಲು ಸಿದ್ಧವಾಗಿದೆ ಎಂದು ಮಹೇಶ್ವರಪ್ಪ (Maheshwarappa) ಹೇಳಿದ್ದಾರೆ. ಇನ್ನು ಈ ಕುರಿತಾಗಿ ಭಾರತೀಯ ಆಹಾರ ನಿಗಮದ ಅಧಿಕಾರಿಗಳೊಂದಿಗೆ ರಾಜ್ಯ ಸರ್ಕಾರ ಗುರುವಾರ ಸಭೆ ನಡೆಸಲಿದೆ ಎಂದು ತಿಳಿಸಿದ್ದಾರೆ.