- ಹುಲಿಯ ವಿಷಪ್ರಾಶನ ಶಂಕೆ – ಅರಣ್ಯ ಇಲಾಖೆಯ ನಿರ್ಲಕ್ಷ್ಯ
- ಮಲೆ ಮಹದೇಶ್ವರ ಹುಲಿ ಸಾವು ಪ್ರಕರಣ: ಎಂಟು ದಿನಗಳಲ್ಲಿ ವರದಿ ಸಲ್ಲಿಸಲು ಸೂಚನೆ
- ವನ್ಯಜೀವಿ ಪ್ರಿಯರ ಆಕ್ರೋಶ – ಹುಲಿಗಳ ರಕ್ಷಣೆಗೆ ತುರ್ತು ಕ್ರಮ ಬೇಡಿಕೆ (Another tiger dies in Male Mahadeshwar forest)
Bengaluru: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ (MM Hills) ಮತ್ತೆ ಒಂದು ಹುಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಕೆಲವು ತಿಂಗಳ ಹಿಂದೆ ಇಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿಹುಲಿಗಳನ್ನು ವಿಷಪ್ರಾಶನ ಮಾಡಿ ಕೊಲ್ಲಲಾಗಿದ್ದ ಘಟನೆ ತೀವ್ರ ಖಂಡನೆಗೆ ಗುರಿಯಾಗಿತ್ತು.
ಇದೀಗ ಮತ್ತೊಂದು ಹುಲಿ ಸತ್ತಿರುವುದು ರಾಜ್ಯದ ವನ್ಯಜೀವಿ ಪ್ರಿಯರ ಮನಸ್ಸಿನಲ್ಲಿ ಆತಂಕ ಹುಟ್ಟಿಸಿದೆ. ಇನ್ನು ಈ ಕುರಿತಾಗಿ ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಈ ಘಟನೆಯ ತನಿಖೆಗೆ ಮುಖ್ಯ ಅರಣ್ಯ
ಸಂರಕ್ಷಣಾಧಿಕಾರಿ (PCCF) ಸ್ಮಿತಾ ಬಿಜ್ಜೂರು ನೇತೃತ್ವದ ತಂಡವನ್ನು ರಚಿಸಿ, 8 ದಿನಗಳೊಳಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಹುಲಿಯ ಸಾವಿನ ಹಿಂದೆ ಇರುವ ಕಳ್ಳಬೇಟೆಗಾರರನ್ನು ಶೀಘ್ರ ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಲು ಸಚಿವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಇನ್ನು ಪ್ರಾಥಮಿಕ ತನಿಖೆಯ ವರದಿಯ ಪ್ರಕಾರ ಸತ್ತ ಹುಲಿಗೆ ಸುಮಾರು 12 ವರ್ಷ ವಯಸ್ಸಾಗಿತ್ತು. ಹುಲಿಯ ದೇಹದಲ್ಲಿ ಗುಂಡಿನ ಗುರುತುಗಳು ಕಾಣಿಸಲಿಲ್ಲ ಮತ್ತು ಯಾವುದೇ ಅಂಗಾಂಗಗಳು ಕತ್ತರಿಸಲ್ಪಟ್ಟಿಲ್ಲ.
ಆದಾಗ್ಯೂ, ವಿಷಪ್ರಾಶನದಿಂದ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಹುಲಿಯ ದೇಹದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ(Forensic Science Laboratory) ಕಳುಹಿಸಲಾಗಿದೆ.
ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ಬಳಿ ಮಣ್ಣಿನಲ್ಲಿ ಹುದುಗಿಸಿದ್ದ ಹುಲಿಯ ತಲೆ, ಭುಜ ಮತ್ತು ಮುಂಗಾಲುಗಳು ಪತ್ತೆಯಾಗಿವೆ. ಉಳಿದ ಭಾಗಗಳು ಇನ್ನೂ ಪತ್ತೆಯಾಗಿಲ್ಲ.
ಈ ಘಟನೆ ಅರಣ್ಯ ಇಲಾಖೆಯ ನಿಗಾವ್ಯವಸ್ಥೆಯಲ್ಲಿರುವ ದುರ್ಬಲತೆಯನ್ನು ಮತ್ತೊಮ್ಮೆ ಬಯಲಿಗೆಳೆಯುತ್ತದೆ. ಮೂರು ತಿಂಗಳ ಹಿಂದೆ ಇದೇ ಪ್ರದೇಶದಲ್ಲಿ ಐದು ಹುಲಿಗಳು ಸತ್ತಿದ್ದವು.
ಅಂದಿನ ಪ್ರಕರಣದಲ್ಲಿ ಕಳ್ಳಬೇಟೆಗಾರರು ಮೃತ ಹಸುವಿನ ದೇಹಕ್ಕೆ ವಿಷ ಹಾಕಿ ಹುಲಿಗಳನ್ನು ಕೊಂದಿದ್ದರು. ಆ ನಂತರ ಅರಣ್ಯ ಇಲಾಖೆ(Forest Department) ಕಾವಲು ಬಲಪಡಿಸುವುದಾಗಿ,
ಹೊರರಾಜ್ಯದ ಜಾನುವಾರುಗಳನ್ನು ಅರಣ್ಯಕ್ಕೆ ಬಿಡದಂತೆ ನಿಷೇಧಿಸುವುದಾಗಿ ಘೋಷಿಸಿತ್ತು. ಆದರೆ ಇತ್ತೀಚಿನ ಘಟನೆ ಇಲಾಖೆಯ ಕ್ರಮಗಳು ಕಾಗದದ ಮಟ್ಟದಲ್ಲೇ ಉಳಿದಿವೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಇನ್ನು ಪರಿಸರವಾದಿಗಳು ಮತ್ತು ಸ್ಥಳೀಯರು ಈ ಘಟನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹುಲಿಗಳ ಸಂರಕ್ಷಣೆ(Conservation of tigers) ವಿಫಲವಾಗಿದೆ ಎಂದು ಆರೋಪಿಸಿ,
ಕಾಡು ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ರಾತ್ರಿ ಪಾಳಿಯಲ್ಲಿ ಪೆಟ್ರೋಲ್ ತಂಡಗಳ ಬಲವರ್ಧನೆ, ಮತ್ತು ಡ್ರೋನ್ ನಿಗಾವ್ಯವಸ್ಥೆ ಸೇರಿದಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ತಜ್ಞರ ಪ್ರಕಾರ ಮಲೆ ಮಹದೇಶ್ವರ ಅರಣ್ಯವು ಕಾವೇರಿ ವನ್ಯಜೀವಿಧಾಮ ಮತ್ತು ಸತ್ಯಮಂಗಲ ಟೈಗರ್ ರಿಸರ್ವ್ ನಡುವೆ ಸಂಪರ್ಕ ಮಾರ್ಗವಾಗಿರುವುದರಿಂದ,
ಇಲ್ಲಿ ನಡೆಯುವ ಹುಲಿಗಳ ಸಾವುಗಳು ಪರಿಸರ ಸಮತೋಲನಕ್ಕೆ ಅಪಾಯ ಉಂಟುಮಾಡಬಹುದು. ಸಚಿವ ಈಶ್ವರ್ ಖಂಡ್ರೆ(Ishwar Khandre) ಅವರು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಅವರು ಮುಂದಿನ ದಿನಗಳಲ್ಲಿ ರಾತ್ರಿ ಪಾಳಿಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವುದು, ಕಳ್ಳಬೇಟೆ ನಿಯಂತ್ರಣ ಘಟಕಗಳನ್ನು ಬಲಪಡಿಸುವುದು,
ಇದನ್ನು ಓದಿ : ಚಾಮರಾಜನಗರದಲ್ಲಿ ಮತ್ತೆ 2 ಹುಲಿ ಮರಿಗಳು ಸಾ*, ಕಾವೇರಿ ವನ್ಯಜೀವಿ ಧಾಮದಲ್ಲಿ ದುರಂತ, ತಾಯಿಯಿಂದ ಬೇರ್ಪಟ್ಟು ಹಾಲಿಲ್ಲದೆ ಸಾ*
ಮತ್ತು ಪೊಲೀಸರ ಸಹಯೋಗದಲ್ಲಿ ತನಿಖೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.ಇದೇ ವೇಳೆ, ವೈಲ್ಡ್‌ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋ (WCCB) ಅಧಿಕಾರಿಗಳೂ ಕೂಡ ತನಿಖೆಗೆ ಜೊತೆಯಾಗಿದ್ದಾರೆ. (Another tiger dies in Male Mahadeshwar forest)