ನಿಸರ್ಗದಲ್ಲಿ(Nature) ಸಿಗುವ ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಗೂಡು ನಿರ್ಮಿಸಿಕೊಳ್ಳುವ ಕಲೆ ಪಕ್ಷಿಗಳಿಗೆ ಹುಟ್ಟಿನಿಂದಲೇ ಕರಗತವಾಗಿರುತ್ತದೆ.
ಗೂಡು ಕಟ್ಟಿ ಮೊಟ್ಟೆ ಇಟ್ಟು ಸಂತಾನ ಅಭಿವೃದ್ಧಿ ಮಾಡಿಕೊಳ್ಳುವ ಪಕ್ಷಿಗಳ(Anthoscopus bird nest is unique) ಜೀವನವೇ ಅದ್ಭುತ. ಸಂತಾನ ಅಭಿವೃದ್ಧಿಗೆ ಸಿದ್ಧವಾಗುವ ಕಾಲ ಎಲ್ಲ ಪಕ್ಷಿಗಳ ಬದುಕಿನ ಮಹತ್ವದ ಘಟ್ಟ.
ಅವು ಹೆಚ್ಚು ಕ್ರಿಯಾಶೀಲವಾಗುವುದು ಈ ಸಮಯದಲ್ಲೇ. ಗಂಡು, ಹೆಣ್ಣು ಪಕ್ಷಿಗಳು ತಮ್ಮ ವಂಶ ಬೆಳೆಸುವ ಕ್ಷಣಗಳನ್ನು ಪರಸ್ಪರ ಹಂಚಿಕೊಳ್ಳುತ್ತವೆ. ಆ ಸಮಯದಲ್ಲಿ ಅವುಗಳಲ್ಲಿ ಜೀವನೋತ್ಸಾಹ ಉಕ್ಕಿ ಹರಿಯುತ್ತದೆ.
https://vijayatimes.com/rahul-gandhi-stand-towards-nupur-sharma/

`ಆ ದಿನಗಳಲ್ಲಿ ಅವು ಇನ್ನು ಹೆಚ್ಚಿನ ಅನ್ಯೋನ್ಯತೆಯಿಂದ ಬದುಕುತ್ತವೆ. ತಮ್ಮ ವಂಶದ ಕುಡಿಯನ್ನು ಈ ಭೂಮಿಗೆ ಬರ ಮಾಡಿಕೊಳ್ಳುವ ಮೊದಲು ಅವು ರಕ್ಷಣೆಗೆ ಒತ್ತುನೀಡಿ ಗೂಡು ನಿರ್ಮಿಸಿಕೊಳ್ಳುತ್ತವೆ. ಅದೊಂದು ಅದ್ಭುತ ಪ್ರಕ್ರಿಯೆ. ಪ್ರತಿಯೊಂದು ಪಕ್ಷಿಯೂ ತನ್ನ ಅನುಕೂಲಕ್ಕೆ ತಕ್ಕಂತೆ ಗೂಡು ನಿರ್ಮಿಸಿಕೊಳ್ಳುತ್ತದೆ.
ಗಿಳಿ, ಮೈನಾ, ಗುಬ್ಬಚ್ಚಿ ಮತ್ತಿತರ ಹಕ್ಕಿಗಳು ಮರ, ಕಟ್ಟಡಗಳಲ್ಲಿರುವ ಪೊಟರೆಗಳಂತಹ ರಂಧ್ರಗಳಲ್ಲಿ ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು ಮರಿ ಮಾಡುತ್ತವೆ.
ಅರಿಶಿನ ಕತ್ತಿನ ಗುಳು ಮುಖ, ನೀಲಿ ನಾಮದ ಕೋಳಿ, ಬಾತು ಕೋಳಿ, ಜಕಾನ ಮೊದಲಾದ ಪಕ್ಷಿಗಳು ನೀರಿನಲ್ಲಿ ಬೆಳೆಯುವ ಸಸ್ಯಗಳು, ಒಣ ಹುಲ್ಲು, ಮತ್ತು ಎಲೆಗಳಂತಹ ಹಗುರ ವಸ್ತುಗಳನ್ನು ಬಳಸಿಕೊಂಡು ವೃತ್ತಾಕಾರದ ತೇಲುವ ಗೂಡುಗಳನ್ನು ನಿರ್ಮಿಸಿಕೊಳ್ಳುತ್ತವೆ.
ಟಿಟ್ಟಿಭ, ಗೌಜುಗ, ಬುರ್ಲಿ ಮುಂತಾದ ಪಕ್ಷಿಗಳು ನೆಲವನ್ನು ಕೆದರಿ ಸುತ್ತಲಿನ ಹುಲ್ಲು, ಎಲೆ, ಸಣ್ಣ ಕಲ್ಲುಗಳನ್ನು ಸುತ್ತ ಇರಿಸಿ ಅದನ್ನೇ ಗೂಡನ್ನಾಗಿ ಮಾಡಿಕೊಂಡು ಮೊಟ್ಟೆ ಇಡುತ್ತವೆ.

ಮೊಟ್ಟೆಗಳಿಂದ ಮರಿಗಳು ಹೊರಬಂದ ಮೇಲೆ ಅವುಗಳನ್ನು ಶತ್ರುಗಳಿಂದ ರಕ್ಷಿಸಲು ಸುತ್ತಮುತ್ತ ಸಹಜ ಪರಿಸರದಂತೆ ಕಾಣುವ ವಾತಾವರಣ ನಿರ್ಮಾಣ ಮಾಡಿ ಮರಿಗಳನ್ನು ಜೋಪಾನ ಮಾಡುತ್ತವೆ. ಮಧುರ ಕಂಠ, ಪಿಕಳಾರ, ಬಾಲದಂಡೆ ಹಕ್ಕಿ ಇತ್ಯಾದಿಗಳು ಪೊದೆಗಳಲ್ಲಿ ಗಿಡಗಳ ಕವಲುಗಳ ಮಧ್ಯೆ ಬಟ್ಟಲಿನ ಆಕಾರದ ಗೂಡು ಕಟ್ಟುತ್ತವೆ. ನಾರು, ಎಲೆ, ಹುಲ್ಲು, ಹತ್ತಿಯಂತಹ ಮೃದುವಾದ ವಸ್ತುಗಳನ್ನು ಬಳಸಿಕೊಂಡು ಗೂಡುಗಳಲ್ಲಿ ಮೊಟ್ಟೆ ಇಟ್ಟು ಮರಿಗಳನ್ನು ಬೆಳೆಸುತ್ತವೆ.
ಬಾನಾಡಿ ಹಕ್ಕಿಗಳು ಮಣ್ಣಿನ ಗೂಡುಗಳನ್ನು ನೀರಿರುವ ಸ್ಥಳಗಳ ಬಳಿ ಹಾಗೂ ಸೇತುವೆಗಳ ಕೆಳಗೆ ನಿರ್ಮಿಸಿಕೊಳ್ಳುತ್ತವೆ.
ಈ ಹಕ್ಕಿಗಳು ತಮ್ಮ ಜೊಲ್ಲನ್ನು ಮಣ್ಣಿನೊಂದಿಗೆ ಬೆರೆಸಿ ಕಲೆಸಿ ಸಣ್ಣ ಉಂಡೆಗಳನ್ನಾಗಿಸಿ ಅವುಗಳನ್ನು ಒತ್ತೊತ್ತಾಗಿರಿಸಿ ಗೂಡು ನಿರ್ಮಿಸಿಕೊಳ್ಳುತ್ತವೆ. ಗೂಡಿಗೆ ಕೆಳಭಾಗದಲ್ಲಿ ಒಳಕ್ಕೆ ಹೋಗಿ ಬರಲು ಬಾಗಿಲು ನಿರ್ಮಿಸಿಕೊಳ್ಳುತ್ತವೆ. ಗೀಜಗ, ಸೂರಕ್ಕಿಗಳು ಹುಲ್ಲು, ನಾರು, ಹತ್ತಿ ಹಾಗೂ ಎಲೆಗಳಿಂದ ನೇತಾಡುವ ಗೂಡು ನಿರ್ಮಿಸಿಕೊಳ್ಳುತ್ತವೆ. ಇದರಲ್ಲಿ ಗೀಜಗನ ಗೂಡು ಉತ್ತಮ ವಿನ್ಯಾಸ ಹೊಂದಿರುತ್ತದೆ, ಅವು ಹೂಜಿಯಾಕಾರದಲ್ಲಿರುತ್ತವೆ. ಈ ಗೂಡುಗಳ ಒಳಗೆ ಮೂರು ಅಂತಸ್ತುಗಳಿರುತ್ತವೆ, ಶತ್ರುಗಳಿಂದ ಮೊಟ್ಟೆ, ಮರಿಗಳನ್ನು ರಕ್ಷಿಸಲು ಈ ವ್ಯವಸ್ಥೆ.

ಮರಕುಟಿಕ, ನೀಲಕಂಠ, ಗಿಳಿ, ಮುಂತಾದ ಹಕ್ಕಿಗಳು ಮರದ ಪೊಟರೆಗಳಲ್ಲಿ ಗೂಡು ಕಟ್ಟುತ್ತವೆ. ಹೆಣ್ಣು ಮಂಗಟ್ಟೆ, ಹಕ್ಕಿ ಮೊಟ್ಟೆ ಇಡುವ ಸಮಯದಲ್ಲಿ ಗೂಡು ಸೇರುತ್ತದೆ. ಗಂಡು ಹಕ್ಕಿ ಪೊಟರೆ ಗೂಡಿನ ಬಾಯಿಯನ್ನು ಮಣ್ಣು, ಹಿಕ್ಕೆ, ಜೊಲ್ಲನ್ನು ಬಳಸಿಕೊಂಡು ಹೆಣ್ಣು ಹಕ್ಕಿಯ ಕೊಕ್ಕು ಮಾತ್ರ ಹೊರಕ್ಕೆ ಬಿಟ್ಟು ಉಳಿದ ಭಾಗವನ್ನು ಮುಚ್ಚುತ್ತದೆ. ಈ ಹಕ್ಕಿಯ ಗೂಡು ಅತ್ಯಂತ ವಿಚಿತ್ರ. ಇನ್ನು, ಆಂಥೋಸ್ಕೋಪಸ್ ಎನ್ನುವ ಪಕ್ಷಿಯಂತೂ ಈ ಎಲ್ಲಾ ಪಕ್ಷಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಅತ್ಯಂತ ವಿಶಿಷ್ಟ ರೀತಿಯಲ್ಲಿ ಗೂಡು ಕಟ್ಟುತ್ತದೆ.
ಹೌದು, ತಮ್ಮ ಮೊಟ್ಟೆಗಳನ್ನು ಹಾವುಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಗೂಡಿನಲ್ಲಿ ನಕಲಿ ರಂದ್ರಗಳನ್ನು ನಿರ್ಮಿಸುತ್ತದೆ! ಇದರಿಂದ ಹಾವು ಗೊಂದಲಕ್ಕೊಳಗಾಗಿ ಇವುಗಳ ಗೂಡಿನ ಸುದ್ದಿಗೆ ಹೋಗುವುದಿಲ್ಲ.
- ಪವಿತ್ರ ಸಚಿನ್