ರಾಘವೇಂದ್ರ ರಾಜ್ ಕುಮಾರ್ ಅವರು ಒಂದು ಅಂತರದ ಬಳಿಕ ಮರುಪ್ರವೇಶ ಮಾಡಿರುವ ಚಿತ್ರ `ರಾಜತಂತ್ರ’ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಟೀಸರ್ ಮತ್ತು ಫೈಟ್ ಸೀನ್ ಬಿಡುಗಡೆಯನ್ನು ಪುನೀತ್ ರಾಜ್ ಕುಮಾರ್ ಅವರು ನಿರ್ವಹಿಸಿದ್ದಾರೆ.
ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಅಪ್ಪು “ಕೊರೊನಾ ಇರುವ ಸಂದರ್ಭದಲ್ಲೇ ಎಚ್ಚರಿಕೆ ವಹಿಸಿ ಪೂರ್ತಿ ಮಾಡಿರುವ ಸಿನಿಮಾ ಎನ್ನುವುದು ಒಂದು ಖುಷಿಯಾದರೆ, ರಾಘಣ್ಣನವರು ಸಿನಿಮಾದ ಮೇಲೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಮತ್ತೊಂದು ಖುಷಿಯಾಗಿದೆ. ಒಬ್ಬ ನಟನಿಗೆ, ವಯಸ್ಸು ಅಥವಾ ಯಾವುದೇ ಪರಿಸ್ಥಿತಿ ಇದ್ದರೂ ಸಿನಿಮಾ ಎನ್ನುವ ವುಚಾರ ಬಂದೊಡನೆ ಹೊಸ ಹುಮ್ಮಸ್ಸು ಬಂದು ಬಿಡುತ್ತದೆ. ಅದಕ್ಕೆ ಜನ ನೀಡಿರುವಂಥ ಪ್ರೀತಿಯೇ ಕಾರಣ. ಅವರ ಹೊಡೆದಾಟದ ಸನ್ನಿವೇಶಗಳನ್ನು ನಾನು ಈಗಾಗಲೇ ನೋಡಿದ್ದೀನಿ. ಇಂಥ ಒಂದು ಉತ್ಸಾಹದಿಂದ ಮಾಡಿರುವ ಚಿತ್ರಕ್ಕೆ ಒಳ್ಳೆಯದಾಗಲಿ” ಎಂದರು.
“ಚಿತ್ರದಲ್ಲಿ ನಾನು ನಿವೃತ್ತ ಮಿಲಿಟರಿ ಅಧಿಕಾರಿಯಾಗಿ ನಟಿಸಿದ್ದೇನೆ. ನನ್ನಿಂದ ಒಂದು ಫೈಟ್ ಕೂಡ ಮಾಡಿಸಿದ್ದಾರೆ. ಯಾವುದನ್ನು ನಾನು ಮಾಡಿದ್ದೇನೆ ಎಂದು ಹೇಳುವುದಿಲ್ಲ. ಅಪ್ಪಾಜಿ ಹೇಳುವಂತೆ ಎಲ್ಲವನ್ನೂ ನನ್ನಿಂದ ಮಾಡಿಸಿದ್ದಾರೆ ಅಷ್ಟೇ. ಇದರ ಶೂಟಿಂಗ್, ಡಬ್ಬಿಂಗ್ ಎಲ್ಲವನ್ನು ನಾನು ಎಂಜಾಯ್ ಮಾಡಿಕೊಂಡು ಮಾಡಿದ್ದೇನೆ. ಚಿತ್ರೀಕರಣ ಮುಗಿದ್ದಿದ್ದೇ ತಿಳಿಯಲಿಲ್ಲ; ಅಷ್ಟೊಂದು ಯೋಜನಾಬದ್ಧವಾಗಿ ಚಿತ್ರ ಮಾಡಿದ್ದಾರೆ. ಜನವರಿ ಒಂದರಂದು ಚಿತ್ರ ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ಚಿತ್ರ ನೋಡಿ ಆಶೀರ್ವಾದ ಮಾಡಬೇಕಿದೆ” ಎಂದು ಚಿತ್ರದ ನಾಯಕ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದರು.
ವಿಜಯ ಭಾಸ್ಕರ್ ಅವರೊಂದಿಗೆ ಸೇರಿ ಪ್ರಹ್ಲಾದ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಹ್ಲಾದ್ ಅವರು ಮಾತನಾಡಿ, “ಹಂಸಲೇಖ ಅವರು ನನ್ನ ನಾಟಕಗಳಿಗೆ ಸಂಗೀತ ನೀಡುತ್ತಿದ್ದರು. ಅವರ ಮೂಲಕವೇ ಸಿಪಾಯಿ' ಚಿತ್ರಕ್ಕೆ ಬರಹಗಾರನಾಗುವ ಅವಕಾಶದೊಂದಿಗೆ ಚಿತ್ರರಂಗಕ್ಕೆ ಬಂದೆ. ಬಳಿಕ ಶಿವಸೈನ್ಯ ಮಾತ್ರವಲ್ಲ,
ಮಾಯಾಮೃಗ’ ಧಾರಾವಾಹಿಯ ಒಂಬತ್ತು ಸಾವಿರ ಸಂಚಿಕೆಗಳಿಗೆ ಸಂಭಾಷಣೆ ಬರೆದಿದ್ದೇನೆ. 2018ರಲ್ಲಿ ವಿಶ್ವಂ' ಡಿಜಿಟಲ್ ಸಂಸ್ಥೆ ಶುರು ಮಾಡಿದೆವು. ರಾಷ್ಟ್ರ ಪ್ರಶಸ್ತಿ ಪಡೆದ
ತುತ್ತೂರಿ’ ಸಿನಿಮಾ ಸೇರಿದಂತೆ ಹತ್ತಾರು ಸಿನಿಮಾಳಿಗೆ ಸಂಭಾಷಣೆ ಬರೆದಿದ್ದೇನೆ. ಇದೀಗ ಲಾಕ್ಡೌನ್ ಸಂದರ್ಭದಲ್ಲಿ ಬರೆದ ಕತೆಯೇ ರಾಜತಂತ್ರ'. ಡಾ.ರಾಜ್ ಕುಮಾರ್ ಅವರಲ್ಲಿ ಅಭಿಮಾನ ಹೊಂದಿರುವ ನನಗೆ ಈ ಚಿತ್ರದಲ್ಲಿ ರಾಘಣ್ಣ ನಾಯಕರಾಗುತ್ತಿದ್ದಾರೆ ಎನ್ನುವುದು ಖುಷಿಯ ವಿಚಾರವಾಗಿದೆ ಎಂದರು. ರಾಘವೇಂದ್ರ ರಾಜ್ ಕುಮಾರ್ ಅವರು ಮರುಪ್ರವೇಶ ಮಾಡಿದಂಥ
ಅಮ್ಮನ ಮನೆ’ ಚಿತ್ರದ ಛಾಯಾಗ್ರಾಹಕ ಪಿ.ವಿ.ಆರ್ ಸ್ವಾಮಿಯವರು ಮೊದಲ ಬಾರಿ ನಿರ್ದೇಶಿಸಿರುವ ಚಿತ್ರ ಇದು. ಪಿವಿಆರ್ ಸ್ವಾಮಿ, ಕಲಾವಿದರಾದ ವೆಂಕಟೇಶ್, ನಿರ್ಮಾಪಕ, ನಟ ಅಮರೇಶ್, ಕುಮಾರ್, ಮಂಗಳಾ ರಾಘವೇಂದ್ರ ರಾಜ್ ಕುಮಾರ್, ಯುವ ರಾಜ್ ಕುಮಾರ್, ಶ್ರಿದೇವಿ ಭೈರೇಗೌಡ ಮೊದಲಾದವರು ಉಪಸ್ಥಿತರಿದ್ದರು. ಅದಿತಿ ಮಹಾದೇವ್ ಕಾರ್ಯಕ್ರಮ ನಿರೂಪಿಸಿದರು.