ಬೆಂಗಳೂರು ಸೆ 8 : ಟೋಯಿಂಗ್ ಸಿಬ್ಬಂದಿಗಳು ವಾಹನಗಳನ್ನು ಟೋಯಿಂಗ್ ಮಾಡುವಾಗ ನಿಯಮಾವಳಿಗಳನ್ನು ಪಾಲಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ನಗರದಲ್ಲಿ ಪಾರ್ಕಿಂಗ್ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನಗಳ ಟೋಯಿಂಗ್ ಮಾಡುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡದೆ ಟೋಯಿಂಗ್ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಹಾಗಾಗಿ ಇನ್ನು ಮುಂದೆ ಟ್ರಾಫಿಕ್ ಪೊಲೀಸರು ವಾಹನ ಟೋಯಿಂಗ್ ಮಾಡುವ ಸಂದರ್ಭದಲ್ಲಿ ವಾಹನ ಮಾಲೀಕರು ಸ್ಥಳದಲ್ಲಿದ್ದರೆ ಅವರಿಂದ ‘ನೋ ಪಾರ್ಕಿಂಗ್’ ಶುಲ್ಕವನ್ನು ಮಾತ್ರ ವಸೂಲಿ ಮಾಡಬೇಕು ಹಾಗೂ ವಾಹನವನ್ನು ಅವರಿಗೆ ಅಲ್ಲಿಯೇ ಹಿಂದಿರುಗಿಸಬೇಕು ಎಂದು ಗೃಹ ಸಚಿವರು ಸೂಚನೆ ನೀಡಿದ್ದಾರೆ.
ಯಾವುದೇ ವಾಹನವನ್ನು ಟೋಯಿಂಗ್ ಮಾಡುವ ಮುಂಚೆ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ವಾಹನ ಮಾಲೀಕರ ಗಮನ ತರಬೇಕು. ಮಾಲೀಕರ ಗಮನ ಸೆಳೆಯಲು ಸೈರನ್ ಅಥವಾ ಹಾರ್ನ್ ಮಾಡಬೇಕು. ವಾಹನ ಟೋಯಿಂಗ್ ಮಾಡಬೇಕಾದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ನಿಯಾಮಾವಳಿಗಳನ್ನು ಅನುಸರಿಸಬೇಕು ಜೊತೆಗೆ ಟೋಯಿಂಗ್ ಸಿಬ್ಬಂದಿಗಳು ಸಾರ್ವಜನಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಟೋಯಿಂಗ್ ಮಾಡಲಾಗುವ ವಾಹನಗಳನ್ನು ಅತ್ಯಂತ ಜಾಗರೂಕತೆಯಿಂದ ಯಾವುದೇ ಹಾನಿಗೊಳಗಾಗದಂತೆಯೂ ನೋಡಿಕೊಳ್ಳಬೇಕು ಎಂದು ಗೃಹ ಸಚಿವರು ಸೂಚನೆ ನೀಡಿದ್ದಾರೆ.