“ಅರ್ಜುನ್ ಗೌಡ” ಎನ್ನುವ ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿರುವ ಈ ಚಿತ್ರದ ನಾಯಕನಾಗಿ ಪ್ರಜ್ವಲ್ ದೇವರಾಜ್ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅದ್ದೂರಿ ಚಿತ್ರಗಳನ್ನು ನಿರ್ಮಿಸಿ ಹೆಸರಾದವರು ನಿರ್ಮಾಪಕ ರಾಮು ತಮ್ಮ ಸಂಸ್ಥೆಯಿಂದ ಅಪಾರ ವೆಚ್ಚದಲ್ಲಿ ,ಅದ್ದೂರಿ ತಾರಾಗಣದೊಂದಿಗೆ ನಿರ್ಮಿಸಿರುವ ಅರ್ಜುನ್ ಗೌಡ ಚಿತ್ರದ ಟ್ರೇಲರ್ ಏಪ್ರಿಲ್ 10 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಲಿದೆ.
ಚಿತ್ರವನ್ನು ಕೂಡ ಸದ್ಯದಲ್ಲೇ ತೆರೆಗೆ ತರುವ ಯೋಜನೆ ಹಾಕಲಾಗಿದ್ದು, ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಪ್ರಜ್ವಲ್ ದೇವರಾಜ್ ಅಭಿನಯದ ‘ಇನ್ಸ್ಪೆಕ್ಟರ್ ವಿಕ್ರಂ’ ಚಿತ್ರದ ಯಶಸ್ಸಿನ ಬಳಿಕ ಬಿಡುಗಡೆಯಾಗುತ್ತಿರುವ ಅರ್ಜುನ್ ಗೌಡ ಚಿತ್ರದ ಬಿಡುಗಡೆಗೆ ಪ್ರಜ್ವಲ್ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಲಕ್ಕಿ ಶಂಕರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಏಳು ಸಾಹಸ ಸನ್ನಿವೇಶಗಳಿವೆ. ಮಾಸ್ ಮಾದ ಸಾಹಸ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಚಿತ್ರದ ಆಕ್ಷನ್ ಸನ್ನಿವೇಶಗಳು ನೋಡುಗರಿಗೆ ಹಬ್ಬವಾಗಲಿದೆ ಎಂದು ಚಿತ್ರತಂಡ ಭರವಸೆ ನೀಡಿದೆ.
ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಅಭಿನಯಿಸಿದ್ದಾರೆ. ಬಾಲಿವುಡ್ ನ ರಾಹುಲ್ ದೇವ್, ಸ್ಪರ್ಶ ರೇಖ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭತ್, ಜೀವನ್, ಹನುಮಂತೇ ಗೌಡ, ಮೋಹನ್ ಜುನೇಜ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕವಿರಾಜ್, ರಾಘವೇಂದ್ರ ಕಾಮತ್, ಶಂಕರ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ , ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ಮೋಹನ್, ಕಂಬಿರಾಜು ಅವರ ನೃತ್ಯ ನಿರ್ದೇಶನ ಅರ್ಜುನ್ ಗೌಡ ಚಿತ್ರಕ್ಕಿದೆ.