ಬೆಂಗಳೂರು, ಏ. 23: ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ, ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನಾದರೂ ಗೌರವಯುತವಾಗಿ ನಡೆಸಲು ವ್ಯವಸ್ಥೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಕೊರೊನಾ ಮಹಾಮಾರಿಯಿಂದ ಜೀವ ತೆತ್ತ ವ್ಯಕ್ತಿಗಳ ಶವಸಂಸ್ಕಾರಕ್ಕೆ ಬೆಂಗಳೂರಿನ ಅಷ್ಟ ದಿಕ್ಕುಗಳಲ್ಲಿನ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ದಿನವೊಂದಕ್ಕೆ ಸುಮಾರು 25 ಶವಗಳನ್ನು ಅಂತ್ಯಸಂಸ್ಕಾರ ಮಾಡಲು ಸರ್ಕಾರ ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
ಅಲ್ಲದೇ, ಬೆಂಗಳೂರಿನ ಎಂಟೂ ದಿಕ್ಕುಗಳಲ್ಲೂ ಮರಗಳಿಲ್ಲದ ಬೆಂಗಾಡು ಅರಣ್ಯ ಭೂಮಿಯಿದೆ.ಇಲ್ಲಿ ಪ್ರತಿದಿನ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರಕ್ಕೆ ಕೂಡಲೇ ವ್ಯವಸ್ಥೆ ಮಾಡಬೇಕು. ಸರಕಾರ ಇದನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೊರೊನಾ ಸೋಂಕಿತರಿಗೆ ಬೆಡ್ ಗಳನ್ನು, ಆಕ್ಸಿಜನ್, ವೆಂಟಿಲೇಟರ್, ಹಾಗೂ ಲಭ್ಯವಿರುವ ಉಪಶಮನದ ಔಷಧಿಗಳನ್ನು ಸರಕಾರ ಕೊಡಲಿಲ್ಲ. ಕನಿಷ್ಟ ಅವರ ಅಂತ್ಯಸಂಸ್ಕಾರವನ್ನಾದರೂ ಗೌರವಯುತವಾಗಿ ನಡೆಸಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಅತ್ಯಂತ ನೋವಿನಿಂದ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ವ್ಯವಸ್ಥೆ ಮಾಡುವಲ್ಲಿ ಮುಗ್ಗರಿಸಿ ಬಿದ್ದ ಸರ್ಕಾರ ಅಂತ್ಯಸಂಸ್ಕಾರಕ್ಕಾದರೂ ಜಾಗದ ವ್ಯವಸ್ಥೆ ಮಾಡುವಲ್ಲಿ ಇನ್ನೂ ತಡಮಾಡದೆ ಕೈಕಟ್ಟಿ ಕೂರಬಾರದು.
ಇಲ್ಲದಿದ್ದರೆ, ಜನರ ಹಿಡಿಶಾಪ ಸರಕಾರಕ್ಕೆ ತಗಲುವುದರಲ್ಲಿ ಸಂಶಯವೇ ಬೇಡ. ಸಾವನ್ನಪ್ಪಿದ ಕೊರೊನಾ ಸೋಂಕಿತರ ಬಂಧು ಬಳಗದವರು ಪಡುತ್ತಿರುವ ಬವಣೆಯನ್ನು ಕಂಡರೆ, ಹೃದಯ ಕಿವುಚಿದಂತಾಗುತ್ತದೆ ಎಂದು ಸರಣಿ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕುಮಾರಸ್ವಾಮಿ, ಕೊರೊನಾ ಸೋಂಕಿತರ ಪರಿಸ್ಥಿತಿಗೆ ಮರುಕ ವ್ಯಕ್ತಪಡಿಸಿದ್ದಾರೆ.