ಜಮ್ಮು(Jammu) ಮತ್ತು ಕಾಶ್ಮೀರದಲ್ಲಿ(Kashmir) ಆರ್ಟಿಕಲ್ 370ನೇ(Article 370) ವಿಧಿಯನ್ನು ರದ್ದುಗೊಳಿಸಿದ ನಂತರ ವಿವಿಧ ಸರ್ಕಾರಿ ಇಲಾಖೆಯಲ್ಲಿ 1700 ಕಾಶ್ಮೀರಿ ಪಂಡಿತರ ನೇಮಕವಾಗಿದೆ. 2019ರ ಆಗಸ್ಟ್ 5 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮತ್ತು ಹಿಂದಿನ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ(Seperation) ನಂತರ ಜಮ್ಮು ಮತ್ತು ಕಾಶ್ಮೀರ ಆಡಳಿತವು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸುಮಾರು 1,700 ಕಾಶ್ಮೀರಿ ಪಂಡಿತರನ್ನು ನೇಮಿಸಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಒದಗಿಸಿದ ಮಾಹಿತಿಯ ಪ್ರಕಾರ 44,684 ಕಾಶ್ಮೀರಿ ವಲಸಿಗ ಕುಟುಂಬಗಳು 1,54,712 ವ್ಯಕ್ತಿಗಳನ್ನು ಒಳಗೊಂಡಿರುವ ಜಮ್ಮುವಿನ ಪರಿಹಾರ ಮತ್ತು ಪುನರ್ವಸತಿ ಕಮಿಷನರ್ (ವಲಸಿಗರು) ಕಚೇರಿಯಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್(Nityanandha roy) ಹೇಳಿದ್ದಾರೆ.
ಕಾಶ್ಮೀರಿ ವಲಸಿಗ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಆಗಸ್ಟ್ 5, 2019 ರಿಂದ 1,697 ಜನರನ್ನು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನೇಮಿಸಿದೆ ಮತ್ತು ಈ ನಿಟ್ಟಿನಲ್ಲಿ ಹೆಚ್ಚುವರಿ 1,140 ಜನರನ್ನು ಆಯ್ಕೆ ಮಾಡಿದೆ ಎಂದು ಲಿಖಿತ ಪ್ರಶ್ನೆಗೆ ಉತ್ತರಿಸಿದ್ದಾರೆ. 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ 439 ಭಯೋತ್ಪಾದಕರ ಹತ್ಯೆ. 5 ಆಗಸ್ಟ್ 2019 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜನವರಿ 26 ರವರೆಗೆ 439 ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಸರ್ಕಾರ ಬುಧವಾರ ಹೇಳಿದೆ.

ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು, ರಾಜ್ಯದಿಂದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ 541 ಭಯೋತ್ಪಾದಕ ಘಟನೆಗಳು ನಡೆದಿವೆ. ಈ ಅವಧಿಯಲ್ಲಿ 98 ನಾಗರಿಕರು ಪ್ರಾಣ ಕಳೆದುಕೊಂಡರು ಮತ್ತು 109 ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾದರು ಎಂದಿದ್ದಾರೆ.
ಈ ಘಟನೆಗಳಲ್ಲಿ ಯಾವುದೇ ಮಹತ್ವದ ಸಾರ್ವಜನಿಕ ಆಸ್ತಿಗೆ ಹಾನಿಯಾಗಿಲ್ಲ. ಆದರೂ, ಸುಮಾರು 5 ಕೋಟಿ 30 ಲಕ್ಷ ರೂಪಾಯಿಗಳ ಖಾಸಗಿ ಆಸ್ತಿ ಹಾನಿಯನ್ನು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು. 5 ಆಗಸ್ಟ್ 2019 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಲಾಯಿತು. ಅಲ್ಲದೇ ಅದನ್ನು ಎರಡು ರಾಜ್ಯಗಳಾಗಿ ವಿಭಜನೆ ಮಾಡಲಾಯಿತು.