ರಾಜ್ಯ ರಾಜಕೀಯದಲ್ಲಿ ಆರ್ಯ-ದ್ರಾವಿಡ ಚರ್ಚೆ ಶುರುವಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಆರ್‍ಎಸ್‍ಎಸ್‍ನ್ನು(RSS) ಟೀಕಿಸುವ ಭರದಲ್ಲಿ ‘ಆರ್‍ಎಸ್‍ಎಸ್‍ನವರು ಭಾರತೀಯರಾ? ಅವರು ದ್ರಾವಿಡರಾ?’ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.

ಮೂಲಭೂತವಾಗಿ ವಿಪಕ್ಷ ನಾಯಕರ ಈ ಪ್ರಶ್ನೆ ಅರ್ಥಹೀನ ಎನಿಸಿಕೊಳ್ಳುತ್ತದೆ. ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಜನಾಂಗಿಯ ವಿಷಯವನ್ನು, ಒಂದು ಸಂಘಟನೆಗೆ ಹೋಲಿಕೆ ಮಾಡುವುದು ಸೂಕ್ತವಲ್ಲ. ಸಾಮಾನ್ಯವಾಗಿ ದಕ್ಷಿಣ ಭಾರತದವರು ‘ದ್ರಾವಿಡರು’ ಮತ್ತು ಉತ್ತರದವರು ‘ಆರ್ಯರು’ ಎಂಬ ಪರಿಕಲ್ಪನೆ ಭಾರತೀಯರಲ್ಲಿದೆ. ಆದರೆ ಆರ್ಯರ ಮೂಲ ಯಾವುದು ಎಂಬ ಪ್ರಶ್ನೆಗೆ ಇಂದಿಗೂ ನಿಖರವಾದ ಉತ್ತರವನ್ನು ಇತಿಹಾಸಕಾರರು ನೀಡಿಲ್ಲ. ಆರ್ಯರ ಮೂಲದ ಕುರಿತು ಅನೇಕ ವಾದಗಳಿವೆ.
ಇನ್ನು ಆರ್ಯರು ಹೊರಗಿನವರು ಎನ್ನುವುದಾದರೆ, ಕಾಂಗ್ರೆಸ್(Congress) ಪಕ್ಷದ ಪರಮೋಚ್ಚ ನಾಯಕರಾದ ನೆಹರೂ ಆದಿಯಾಗಿ ಇಡೀ ಗಾಂಧಿ ಕುಟುಂಬವು ಆರ್ಯರು ಎನಿಸಿಕೊಳ್ಳುತ್ತಾರೆ. ಪ್ರಧಾನಿ(PrimeMinister) ನರೇಂದ್ರ ಮೋದಿ(Narendra Modi), ರಾಷ್ಟ್ರಪತಿ ರಾಮನಾಥ್ ಕೋವಿಂದ್(Ramanath Kovind) ಎಲ್ಲರೂ ಆರ್ಯರಲ್ಲವೇ..? ಇನ್ನು ಸಿದ್ದರಾಮಯ್ಯ ಹೇಳುವ ಆರ್ಯ-ದ್ರಾವಿಡ ಪರಿಕಲ್ಪನೆ ಜಾತಿ ಆಧಾರದಲ್ಲಿ ವಿಂಗಡನೆಯಾಗಿದೆ ಎಂಬುದು ಮೇಲ್ನೋಟದ ಸತ್ಯ.

ಆರ್‍ಎಸ್‍ಎಸ್ ಸಂಘಟನೆ ‘ಬ್ರಾಹ್ಮಣರ ಸಂಘಟನೆ’ ಎನ್ನುವುದನ್ನು ಅವರು ಪರೋಕ್ಷವಾಗಿ ‘ಆರ್‍ಎಸ್‍ಎಸ್‍ನವರು ಆರ್ಯರು’ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ತಂತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಒಂದು ಸಾಮಾಜಿಕ ಸೇವಾ ಸಂಘಟನೆಯನ್ನು ಜನಾಂಗಿಯ ಆಧಾರದಲ್ಲಿ ಗುರುತಿಸುವುದು ಎಷ್ಟರ ಮಟ್ಟಿಗೆ ಸೂಕ್ತ ಎಂಬುದನ್ನು ವಿಪಕ್ಷ ನಾಯಕರೇ ಉತ್ತರಿಸಬೇಕು. ಜಾತ್ಯಾತೀತ ಪಕ್ಷವೊಂದು ಜನಾಂಗಿಯ ವಿಷಯಾಧಾರಿತ ಚರ್ಚೆಗೆ ಮುಂದಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ.
ಅಖಂಡ ಭಾರತದ ಪರಿಕಲ್ಪನೆಯ ಮೂಲಕ ದೇಶವನ್ನು ಗಟ್ಟಿಗೊಳಿಸಬೇಕಾದ ರಾಜಕೀಯ ನಾಯಕರು ಈ ರೀತಿಯ ಅಸಂಬದ್ದ ಹೇಳಿಕೆ ನೀಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ. ಈ ರೀತಿಯ ಚರ್ಚೆಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವೆಲ್ಲರೂ ಭಾರತೀಯರು ಎಂಬುದು 21ನೇ ಶತಮಾನದ ನಗ್ನಸತ್ಯ.