ಬೆಂಗಳೂರು, ಮಾ. 12: ಕಾಂಗ್ರೆಸ್ ಪಕ್ಷ ಸಾಗರವಿದ್ದಂತೆ. ಆಕಾಶದಿಂದ ಹನಿಯಾಗಿ ಬಿದ್ದ ಮಳೆ ನೀರು, ಹೊಳೆ, ನದಿಯಾಗಿ ಸಾಗರ ಸೇರಬೇಕು. ಅದೇ ರೀತಿ ಹುಟ್ಟಿನಿಂದಲೇ ರಕ್ತಗತ ಕಾಂಗ್ರೆಸ್ಸಿಗರಾಗಿರುವ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಗೆ ಮರಳಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಜತೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸಮಾಲೋಚನೆ ನಡೆಸಿದ ಬಳಿಕ ಅವರ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣದ ಆರಂಭದ ದಿನಗಳಲ್ಲಿ ನನ್ನನ್ನು ಗುರುತಿಸಿ, ಬೆಳೆಸಿದ ಧಿಮಂತ ನಾಯಕ ಬಂಗಾರಪ್ಪನವರನ್ನು ನಾನಿವತ್ತು ಸ್ಮರಿಸುತ್ತೇನೆ. ಬಹಳ ಚಿಕ್ಕ ವಯಸ್ಸಿನಲ್ಲೇ, ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ, ನಾನು ಸೇರಿದಂತೆ ಬಹಳ ಯುವಕರನ್ನು ಅವರು ಆಕರ್ಷಿಸಿದ್ದರು. ಅವರ ರಾಜಕಾರಣದ ಗರಡಿಯಲ್ಲಿ ಬೆಳೆದವನು ನಾನು. ಇಲ್ಲಿವರೆಗೂ ಬಂದಿದ್ದೇನೆ. ಇವತ್ತು ಅವರ ಸುಪುತ್ರ ಮಧುಬಂಗಾರಪ್ಪ ಅವರು ನನ್ನನ್ನು ಭೇಟಿ ಮಾಡಿದ್ದಾರೆ.
ಬಹಳ ದಿನಗಳಿಂದ ನಾನು ಅವರಿಗೆ ಗಾಳ ಹಾಕಿಕೊಂಡೇ ಬಂದಿದ್ದೆ. ಅವರ ತಂದೆ ನಮ್ಮ ಪಕ್ಷದ ಸಂಘಟನೆಗೆ ದೊಡ್ಡ ಶಕ್ತಿ ಕೊಟ್ಟಿದ್ದರು ರಾಜ್ಯದಲ್ಲಿ ಅನೇಕ ನಾಯಕರನ್ನು ಬೆಳೆಸಿ, ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಇವೆಲ್ಲವೂ ಶಾಶ್ವತವಾಗಿ ಉಳಿದಿವೆ. ಕೆಲವು ಭಿನ್ನಾಭಿಪ್ರಾಯಗಳಿಂದ ಅವರು ನಮ್ಮ ಪಕ್ಷ ತೊರೆದಿದ್ದರು. ಅದರ ಬಗ್ಗೆ ಈಗ ಚರ್ಚೆ ಬೇಡ. ಆಕಾಶದಿಂದ ಹನಿಯಾಗಿ ಬಿದ್ದ ನೀರು ನದಿ ಮೂಲಕ ಸಮುದ್ರ ಸೇರಲೇಬೇಕು. ಕಾಂಗ್ರೆಸ್ ಪಕ್ಷ ಕೂಡ ಸಾಗರ ಇದ್ದಂತೆ. ನಮ್ಮ ವರಿಷ್ಠರು ನಮಗೆ ಕರೆ ಮಾಡಿ, ಮಧು ಬಂಗಾರಪ್ಪ ನಿಮ್ಮನ್ನು ಬಂದು ಭೇಟಿ ಮಾಡಲಿದ್ದಾರೆ ಎಂದು ಸೂಚಿಸಿದ್ದರು. ವರಿಷ್ಠರು ಮಧುಬಂಗಾರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತನಾಡಿದ್ದಾರೆ. ಅವರೂ ಕೂಡ ಘಳಿಗೆ, ಮುಹೂರ್ತದ ಬಗ್ಗೆ ಯೋಚಿಸುತ್ತಿದ್ದರು.
ಇವರ ಜತೆ ರಾಜ್ಯದ ಉದ್ದಗಲಕ್ಕೂ ಅನೇಕ ಬೆಂಬಲಿಗರು, ಜೊತೆಯಲ್ಲಿ ಕೆಲಸ ಮಾಡಿದವರು ಇದ್ದಾರೆ. 10 ವರ್ಷಗಳ ಕಾಲ ಪಕ್ಷದಲ್ಲಿ ದುಡಿದಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಮಧು ಅವರು ಹುಟ್ಟಿನಿಂದಲೇ, ರಕ್ತಗತವಾಗಿ ಕಾಂಗ್ರೆಸಿಗರಾಗಿದ್ದಾರೆ. ಅವರ ಎಲ್ಲ ಆಚಾರ-ವಿಚಾರಗಳು ಕಾಂಗ್ರೆಸ್ ತತ್ವ-ಸಿದ್ದಾಂತ ಆಧಾರದ ಮೇಲೆ ನಿಂತಿವೆ. ಹೀಗಾಗಿ ಕಾಂಗ್ರೆಸ್ ಅವರಿಗೆ ಹೊಸದಲ್ಲ. ಯಾವಾಗ ಪಕ್ಷ ಸೇರುತ್ತಾರೆ ಎಂಬುದರ ಬಗ್ಗೆ ರಾಷ್ಟ್ರೀಯ ನಾಯಕರ ಜತೆ ಮಾತನಾಡಬೇಕಿದೆ. ಇವರು ನಮ್ಮ ವಿರೋಧ ಪಕ್ಷದ ನಾಯಕರನ್ನೂ ನಿನ್ನೆ ಭೇಟಿ ಮಾಡಿದ್ದಾರೆ. ಅಲ್ಲದೇ ಅನೇಕ ಹಿರಿಯ ನಾಯಕರು ಬಂಗಾರಪ್ಪ ಅವರ ಜತೆ ಕೆಲಸ ಮಾಡಿದ್ದರು. ಅವರ ಆಶೀರ್ವಾದವೂ ಇವರಿಗೆ ಇದೆ. ಇವರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಸೇರ್ಪಡೆ ದಿನದ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿ ತಿಳಿಸುತ್ತೇವೆ.
ಇದೇ ವೇಳೆ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿದ ಅವರು, ಗೀತಾ ಶಿವರಾಜ್ ಕುಮಾರ್ ಅವರು ಸಾಮಾನ್ಯ ಮಹಿಳೆ ಅಲ್ಲ. ಪಕ್ಷ ಕಷ್ಟಕಾಲದಲ್ಲಿದ್ದಾಗ ಅದಕ್ಕಾಗಿ ಹೋರಾಟ ಮಾಡಿದವರು. ಗೌರವಾನ್ವಿತ ಕುಟುಂಬಕ್ಕೆ ಸೇರಿದವರಾಗಿದ್ದು, ಅವರಿಗೆ ಅವರದೇ ಆದ ಗೌರವವನ್ನು ನಾವು ನೀಡಬೇಕು. ಈ ಬಗ್ಗೆ ನಾನು ದೆಹಲಿ ನಾಯಕರೊಂದಿಗೆ ಚರ್ಚಿಸಿ, ಕೆಲವು ಪ್ರಕ್ರಿಯೆಗಳನ್ನು ಅನುಸರಿಸಬೇಕು. ಅವರೊಂದಿಗೆ ನಾವು ಚರ್ಚಿಸುತ್ತೇವೆ ಎಂದು ತಿಳಿಸಿದರು.