ಅಲಹಾಬಾದ್: ಉತ್ತರ ಪ್ರದೇಶದ ಲಂಖೀಪುರ ಖೇರಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ದ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ರೈತರ ಮೇಲೆ ಕಾರು ಹರಿಸಿದ ಆರೋಪ ಎದುರಿಸುತ್ತಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಅವರ ಮಗ ಆಶೀಶ್ ಮಿಶ್ರಾ ಅವರಿಗೆ ಜಾಮೀನು ದೊರಕಿದೆ. ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠವು ಮುಖ್ಯ ಆರೋಪಿ ಆಶೀಶ್ ಮಿಶ್ರಾ ಅವರಿಗೆ ಜಾಮೀನು ಮಂಜೂರು ಮಾಡಿದೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು ಆರಂಭವಾಗಿರುವ ಸಂದರ್ಭದಲ್ಲಿಯೇ ಆಶೀಶ್ ಮಿಶ್ರಾಗೆ ಜಾಮೀನು ದೊರಕಿದೆ.

ಘಟನೆ ಹಿನ್ನೆಲೆ : ಕಳೆದ ವರ್ಷ ಅಕ್ಟೋಬರ್ 3 ರಂದು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಆಶಿಶ್ ಮಿಶ್ರಾ ಹಾಗೂ ಅವರ ಬೆಂಗಾವಲು ಪಡೆಯ ವಾಹನಗಳು ಚಲಿಸಿದ್ದವು. ಘಟನೆ ಬಳಿಕ ಸ್ಥಳದಲ್ಲಿ ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದರು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ಈ ಕಾರು ಚಲಾಯಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು. ಅವರನ್ನು ಬಳಿಕ ಬಂಧಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿರುವವರ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಅಜಾಗರೂಕತೆಯಿಂದ ವಾಹನ ಚಾಲನೆ), 338 (ನಿರ್ಲಕ್ಷ್ಯದಿಂದ ಗಂಭೀರ ಗಾಯಗೊಳ್ಳಲು ಕಾರಣವಾಗುವುದು) ಹಾಗೂ 340 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾಗುವುದು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದರ ಬದಲಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ರ (ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಬೇಕು ಎಂದು ಎಸ್ಐಟಿ ವಿನಂತಿ ಮಾಡಿತ್ತು.