ಬೆಂಗಳೂರು ಸೆ 23 : ಬಿಬಿಎಂಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಒಟ್ಟು 1751 ಕೆರೆಗಳ ಪೈಕಿ 1500 ಕೆರೆಗಳು ಒತ್ತುವರಿಯಾಗಿದ್ದು, ಆ ಪೈಕಿ 1100 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಕೆರೆ ಸಂರಕ್ಷಣೆ ವಿಚಾರದಲ್ಲಿ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕೆರೆ ಒತ್ತುವರಿ ತೆರವುಗೊಳಿಸಲು ಕಟಿಬದ್ಧವಾಗಿದೆ. ಆದರೆ, ಈ ವಿಚಾರದಲ್ಲಿ ಯಾರೂ ಕೂಡ ರಾಜಕಾರಣ ಮಾಡದೆ ಸಹಕರಿಸಬೇಕು. ಆಗ ಮಾತ್ರ ಕೆರೆಗಳನ್ನು ರಕ್ಷಣೆ ಮಾಡಲು ಸಾಧ್ಯ. ರಾಜ ಮಹಾರಾಜರು, ಆಡಳಿತಗಾರರು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಕಟ್ಟಿದ ಸಾವಿರಾರು ಕೆರೆಗಳ ಪೈಕಿ ನೂರಾರು ಕೆರೆಗಳನ್ನು ಒತ್ತುವರಿ ಮಾಡಲಾಗಿದೆ.
ಸರ್ಕಾರಿ ಸಂಸ್ಥೆಯಾಗಿರುವ ಬಿಡಿಎ ಕೂಡ ಕೆರೆಗಳನ್ನು ಒತ್ತುವರಿ ಮಾಡಿ ಬಡಾವಣೆ ನಿರ್ಮಾಣ ಮಾಡಿದೆ. ಯಾವುದೇ ಸರ್ಕಾರ ಈ ವರೆಗೆ ಒಂದೇ ಒಂದೂ ಕೆರೆಯನ್ನೂ ಕಟ್ಟಲಿಲ್ಲ. ಹೀಗಿರುವಾಗ ಹಿಂದಿನವರು ಕಟ್ಟಿದ ಕೆರೆಗಳನ್ನಾದರೂ ನಾವು ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಹಲವು ಭಾಗಗಳಲ್ಲಿ ಒತ್ತುವರಿಯಾಗಿದೆ. ಬಿಡಿಎ ಭೂಕಬಳಿಕೆ, ಬಸ್ ನಿಲ್ದಾಣ ನಿರ್ಮಾಣಗಳ ಜೊತೆಗೆ ಖಾಸಗಿಯವರಿಂದಲೂ ಒತ್ತುವರಿಯಾಗಿದೆ. ಈ ನಿಟ್ಟಿನಲ್ಲಿ ಮುಂದೆ ಇಂತಹ ಒತ್ತುವರಿ ಕಾರ್ಯ ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ಪ್ರತಿ ಶನಿವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇರುವ ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.
ಇದೇ ವೇಳೆ ಒತ್ತುವರಿಯಾಗಿರುವ ಕೆರೆಗಳ ಕುರಿತು ಅಂಕಿಅಂಶಗಳೊಂದಿಗೆ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ 39,179 ಇದರ ವಿಸ್ತೀರ್ಣ 7 ಲಕ್ಷ ಎಕರೆಯಷ್ಟಿದೆ. ಇನ್ನು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 705 , ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ 710, ಬಿಬಿಎಂಪಿಯಲ್ಲಿ 204, ಬಿಡಿಎ ವ್ಯಾಪ್ತಿಯಲ್ಲಿ 5 ಕೆರೆಗಳಿವೆ. ಬೆಂಗಳೂರಿನಲ್ಲಿರುವ, ಅಸ್ತಿತ್ವದಲ್ಲಿರುವ ಕೆರೆಗಳು ಸೇರಿದಂತೆ 837 ಕೆರೆಗಳ ಪೈಕಿ 774 ಕೆರೆಗಳು ಒತ್ತುವರಿಯಾಗಿದ್ದು, 360 ಕೆರೆಗಳನ್ನು ತೆರವುಗೊಳಿಸಲಾಗಿದ್ದು, 384 ಇನ್ನು ಬಾಕಿ ಇದೆ. ಗ್ರಾಮಾಂತರ ಜಿಲ್ಲೆಯಲ್ಲಿನ 710 ಕೆರೆಗಳ ಪೈಕಿ 643 ಕೆರೆಗಳು ಒತ್ತುವರಿಯಾಗಿದ್ದು, 544 ಕೆರೆ ತೆರವುಗೊಳಿಸಲಾಗಿದೆ. ಇನ್ನು 99 ಬಾಕಿ ಇವೆ ಎಂದರು.
ಕೆರೆ ಒತ್ತುವರಿ ತೆರವು, ಸಂರಕ್ಷಣೆ ವಿಚಾರದಲ್ಲಿ ಸರ್ಕಾರ ಯಾವುದೇ ಅಕ್ರಮ ನಡೆಯಲು ಬಿಡುವುದಿಲ್ಲ. ಇದರಲ್ಲಿ ಯಾವುದೇ ರಾಜಕಾರಣ ನಡೆಯಲು ಬಿಡುವುದಿಲ್ಲ. ಕಾನೂನಾತ್ಮಕ ಕ್ರಮಗಳ ಮೂಲಕ ಒತ್ತುವರಿ ತೆರವು, ಕೆರೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.