ಎಚ್.ಡಿ ರೇವಣ್ಣನಿಗೆ(HD Revanna) ಶಿಕ್ಷಣ(Education) ಅಂದ್ರೆ ಏನು ಅನ್ನೋದೆ ಗೊತ್ತಿಲ್ಲ. ನಾಲ್ಕು ಬಿಲ್ಡಿಂಗ್ ಕಟ್ಟೊದನ್ನೇ ಶಿಕ್ಷಣ ಅಂದುಕೊಂಡಿದ್ದಾನೆ ಎಂದು ಉನ್ನತಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ವ್ಯಂಗ್ಯವಾಡಿದ್ದಾರೆ.

ಹಾಸನಕ್ಕೆ(Hassan) ಭೇಟಿ ನೀಡಿದ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ಹಿರಿಯರಾದ ಎಚ್.ಡಿ ದೇವೇಗೌಡರ(HD Devegowda) ಬಗ್ಗೆ ಅಪಾರವಾದ ಗೌರವವಿದೆ. ಆದರೆ ಎಚ್.ಡಿ ರೇವಣ್ಣ ಮತ್ತು ಎಚ್.ಡಿ ಕುಮಾರಸ್ವಾಮಿಯವರಿಗೆ ವ್ಯವಸ್ಥೆಯಲ್ಲಿ ಯಾವ ಸುಧಾರಣೆ ತರಬೇಕು, ಅಭಿವೃದ್ದಿ ಕೆಲಸಗಳನ್ನು ಹೇಗೆ ನಡೆಸಬೇಕೆಂಬ ಕಲ್ಪನೆಯೇ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತಂದಿದ್ದೇವೆ. ಪಾಪ ಇದೆಲ್ಲ ರೇವಣ್ಣನಿಗೆ ಅರ್ಥವಾಗಲ್ಲ.
ಜೆಡಿಎಸ್ ಪಕ್ಷದವರಿಗೆ ಇವರ ವೇಗಕ್ಕೆ ನಾವೀಲ್ಲವಲ್ಲ, ರಾಜಕೀಯದಲ್ಲಿ ಅಡ್ರೆಸ್ ಇಲ್ಲದೇ ಹೋಗಿದ್ದೇವೆ ಎಂಬ ಕೊರಗು ಕಾಡುತ್ತಿದೆ ಎಂದರು. ಇನ್ನು ರೇವಣ್ಣ ಅವರು ಪ್ರಾಮಾಣಿಕ, ದಕ್ಷ, ಬಹಳ ಪಾರದರ್ಶಕವಾಗಿ ಕೆಲಸ ಮಾಡಿರುವ ನಾಯಕ. ಅವರ ವಿಚಾರ ಏನೆಂದು ಅವರ ಕ್ಷೇತ್ರದ ಜನತೆಗೆ, ಅವರ ಜೊತೆಯಲ್ಲಿರುವವರಿಗೆ ಮತ್ತು ಇಡೀ ರಾಜ್ಯಕ್ಕೆ ಗೊತ್ತಿದೆ. ನನ್ನ ಬಗ್ಗೆ ಮಾತನಾಡುವ ನೈತಿಕತೆ, ಅರ್ಹತೆ ಮತ್ತು ಬದ್ದತೆ ಅವರಿಗಿಲ್ಲ. ಹೀಗಾಗಿ ನನ್ನ ಬಗ್ಗೆ ಹೇಳಿಕೆ ಕೊಡಲು ಒಳ್ಳೆಯ ವಿಚಾರಗಳನ್ನು ಮತ್ತು ಕಲ್ಪನೆಗಳನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಇನ್ನು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ನೀಡಿದ ವಿಚಾರದ ಕುರಿತು ಮಾತನಾಡಿದ ಅವರು, ನಿಮ್ಮ ಬಳಿ ಇರುವ ದಾಖಲೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತನಿಖೆಯ ಹಿತದೃಷ್ಟಿಯಿಂದ ನಿಮ್ಮ ಬಳಿಯಿರುವ ಮಾಹಿತಿಯನ್ನು ನಮಗೂ ನೀಡಿ ಎಂದು ಸಿಐಡಿ ನೋಟಿಸ್ ನೀಡಿ ಕರೆದಿದ್ದಾರೆ. ನೀವು ಕ್ರೈಂ ಮಾಡಿದ್ದೀರಿ ಎಂದು ನಿಮಗೆ ನೋಟಿಸ್ ನೀಡಿಲ್ಲ. ಒರ್ವ ಜನಪ್ರತಿನಿಧಿಯಾಗಿ ನೀವೇ ಜನರನ್ನು ದಾರಿ ತಪ್ಪಿಸುತ್ತಿದ್ದೀರಿ.

ಕಾನೂನಿಗೆ ಬಗ್ಗೆ ಅರಿವಿರುವ ನಿಮ್ಮಂತವರು ಈ ರೀತಿ ಹೇಳಿಕೆ ನೀಡಬಾರದು. ಅಕ್ರಮದ ಕುರಿತು ನಿಮ್ಮ ಬಳಿ ಇರುವ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲು ಏನು ಕಷ್ಟ?ಎಂದು ಪ್ರಶ್ನಿಸಿದರು.