ಉಡುಪಿ ಡಿ 29 : ಕೊರಗರ ಮೇಲೆ ಪೊಲೀಸರು ಸೋಮವಾರ ರಾತ್ರಿ ಏಕಾಏಕಿ ದಾಳಿ ಮಾಡಿ ಹಲ್ಲೆ ಮಾಡಿರುವ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಜಿಲ್ಲೆಯ ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗರ ಕಾಲೋನಿಯಲ್ಲಿ ಸೋಮವಾರ ರಾತ್ರಿ ನಡೆದ ಸಮಾರಂಭವೊಂದಕ್ಕೆ ಏಕಾಏಕಿ ದಾಳಿ ಮಾಡಿದ ಪೊಲೀಸರು, ಮದುಮಗನ ಸಹಿತ ಅಮಾಯಕ ಕೊರಗರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಅಲ್ಲಿರುವ 9ಕ್ಕೂ ಹೆಚ್ಚು ಕುಟುಂಬದವರು ಅಮಾಯಕರಾಗಿದ್ದು, ಅವರ ಮೇಲೆ ವಿನಾಕಾರಣ ದೌರ್ಜನ್ಯ ಎಸಗಿರುವ ಪೊಲೀಸರ ಮೇಲೆ ತಕ್ಷಣ ಕಠಿಣ ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದ್ದಾರೆ. ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪಶ್ಚಿಮ ವಲಯ ಐಜಿಪಿ ಅವರಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಈಗಾಗಲೇ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಸೂಚಿಸಿದ್ದಾರೆ.
ಸಂತ್ರಸ್ತ ಕೊರಗ ಜನಾಂಗಕ್ಕೆ ನ್ಯಾಯ ಒದಗಿಸುವಲ್ಲಿ ಮತ್ತು ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವ ವಿಚಾರದಲ್ಲಿ ಯಾವುದೇ ಆತಂಕ ಬೇಡ. ಇಂದು ಸದ್ರಿ ಕೊರಗರ ಜನಾಂಗದ ಕೇರಿಗೆ ಭೇಟಿ ನೀಡಲಿದ್ದು, ನೊಂದ ಕುಟುಂಬದ ಜೊತೆ ಚರ್ಚಿಸುವುದಾಗಿ ಸಚಿವ ಕೋಟ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.