ಮೈಸೂರು ಸೆ 2 : ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಈಗಾಗಲೇ ಸಜ್ಜುಗೊಂಡಿದ್ದು ಸೆ 28ಕ್ಕೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ 2023ರ ವಿಧಾನಸಭಾ ಚುನಾವಣೆ ವೇಳೆಗೆ ಜೆಡಿಎಸ್ ವತಿಯಿಂದ ಮಿಷನ್ 123 ಆಗಲಿದೆ. ಈ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷವು ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗುವುದು. ನಂತರದ ದಿನಗಳಲ್ಲಿ 10 ರಿಂದ 15 ಅಭ್ಯರ್ಥಿಗಳ ಹೆಸರು ಪಟ್ಟಿಗೆ ಸೇರಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಮುಂಬರುವ ಚುನಾವಣಾ ಸಿದ್ಧತೆ ದೃಷ್ಠಿಯಿಂದ ಎಲ್ಲರಿಗೂ ಕೂಡ ಬಿಡದಿ ಬಳಿಯ ನನ್ನ ತೋಟದಲ್ಲೇ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಹೇಳಿದರು. ಯಾರೂ ಬೇಕಾದರೂ ಪಕ್ಷ ತೊರೆಯಬಹುದು ಪಕ್ಷ ತೊರೆಯುವವರಿಗೆ ಜೆಡಿಎಸ್ ಬಾಗಿಲು ದೊಡ್ಡದಾಗಿದೆ. ಬರುವವರು ಬರಬಹುದು ಹೋಗುವವರು ಹೋಗಬಹುದು. ಎಂದು ಪರೋಕ್ಷವಾಗಿ ಜಿ.ಟಿ.ದೇವೇಗೌಡರನ್ನು ಕುಟುಕಿದರು.