ನವದೆಹಲಿ ಆ 18 : ಅಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ ಧರ್ಮದರವರು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುವುದಾದರೆ ಭಾರತದಲ್ಲಿ ಆಶ್ರಯ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾಗಿರುವ ಹಿನ್ನಲೆಯಲ್ಲಿ ಸಾಕಷ್ಟು ಮಂದಿ ಅಫ್ಘಾನಿಸ್ತಾನದಿಂದ ಬೇರೆ ದೇಶಗಳತ್ತ ವಲಸೆ ಹೋಗುತ್ತಿದ್ದು, ಈ ಹಿನ್ನಲೆಯಲ್ಲಿ ಭಾರತಕ್ಕೆ ಬರಲು ಇಚ್ಛಿಸುವ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಸಿಖ್ ಹಾಗೂ ಹಿಂದೂಗಳಿಗೆ ಆಶ್ರಯ ನೀಡಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ಸೂಚಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಅಲ್ಲಿನ ಭಾರತೀಯರ ಸಹಾಯಕ್ಕೆ ಪ್ರಧಾನಿ ಮೋದಿ ಮುಂದಾಗಿದ್ದಾರೆ. ಆಫ್ಘನ್ನಲ್ಲಿ ಇರುವ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಬೇಕು ಎಂದು ವಿದೇಶಾಂಗ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಹಾಯಕ್ಕಾಗಿ ಭಾರತದತ್ತ ಬರಲು ಮುಖ ಮಾಡಿರುವ ನಿರಾಶ್ರಿತರಿಗೆ ಎಲ್ಲ ನೆರವು ನೀಡುವುದಾಗಿ ಮೋದಿ ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಭಾರತೀಯರ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಅಲ್ಲಿ ಇನ್ನೂ ಕೆಲವು ಭಾರತೀಯರು ಇದ್ದಾರೆ ಮತ್ತು ಅಲ್ಲಿಗೆ ಏರ್ ಇಂಡಿಯಾ ತನ್ನ ವಾಣಿಜ್ಯ ಸೇವೆಗಳನ್ನು ಮುಂದುವರಿಸಲಿದೆ ಎಂದು ಅವರು ತಿಳಿಸಿದ್ದಾರೆ.