ಬೆಂಗಳೂರು, ಜು. 10: ತಮ್ಮ ಹೆಗಲ ಮೇಲೆ ಕೈ ಹಾಕಿದ ಕಾಂಗ್ರೆಸ್ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಕಪಾಳಮೋಕ್ಷ ಮಾಡಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ವ್ಯಂಗ್ಯವಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ? ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, “ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ? ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದುಕೊಂಡು ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಹಲ್ಲೆ ಮಾಡಿರುವುದು ಅಕ್ಷಮ್ಯ” ಎಂದು ಹೇಳಿದೆ.
ಸಾರ್ವಜನಿಕ ಜೀವನದಲ್ಲಿ ಇದ್ದುಕೊಂಡು ಒಬ್ಬ ವ್ಯಕ್ತಿಯ ಮೇಲೆ ಸಾರ್ವಜನಿಕವಾಗಿ, ಮಾಧ್ಯಮಗಳ ಎದುರು ಹಲ್ಲೆ ಮಾಡುವುದು ಶಿವಕುಮಾರ್ ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತಿದೆ. ಈ ಹಿಂದೆ ಸೆಲ್ಫಿ ತೆಗೆಯಲು ಬಂದ ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ ಮಾಡಿದ್ದರು. ಡಿಕೆಶಿಯವರೇ, ನೀವು ರಾಜಕಾರಣಿಯೋ ಅಥವಾ ರೌಡಿಯೋ!?” ಎಂದು ಪ್ರಶ್ನಿಸಿದೆ.
ಕಾರ್ಯಕರ್ತ ಹತ್ತಿರ ಬಂದ ಕಾರಣಕ್ಕೆ ಸಾರ್ವಜನಿಕವಾಗಿ ಹಲ್ಲೆ ಮಾಡುವ ಶಿವಕುಮಾರ್ ಅವರ ಬಳಿ ಜನಸಾಮಾನ್ಯರು ಹೋದರೆ ಗತಿಯೇನು ? ಕೆಪಿಸಿಸಿ ಅಧ್ಯಕ್ಷರೇ, ನೀವು ಹೊಡಿ, ಬಡಿ ರಾಜಕಾರಣದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಹೊರಟಿದ್ದೀರಾ? ಎಂದು ಕೇಳಿದೆ.
ಕೆಪಿಸಿಸಿ ಅಧ್ಯಕ್ಷರ ಹದ್ದು ಮೀರಿದ ವರ್ತನೆಗಳು ಇತ್ತೀಚೆಗೆ ಮಿತಿ ಮೀರುತ್ತಿದೆ. ʼನಾನು ಮಾತಾಡುವಾಗ ಮಧ್ಯ ಮಾತಾಡಿದ್ರೆ ಒದ್ದು ಹೊರಹಾಕುವೆ ಎಂದು ಇತ್ತೀಚೆಗೆ ಡಿ.ಕೆ. ಶಿವಕುಮಾರ್ ಗದರಿಸಿದ್ದರು. ಸಾರ್ವಜನಿಕವಾಗಿ ಹೊಡೆಯುವುದು, ಒದೆಯೋದು, ಕಾರ್ಯಕರ್ತರ ಮೊಬೈಲನ್ನು ಕಿತ್ತೆಸೆಯುವುದು ಇದೆಲ್ಲ ರೌಡಿ ಲಕ್ಷಣ ಅಲ್ಲದೆ ಮತ್ತೇನು?” ಎಂದು ಪ್ರಶ್ನಿಸಿದೆ.
ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲು ಅರಿತುಕೊಳ್ಳಬೇಕು.
ಮಹಾನಾಯಕ ಡಿಕೆಶಿಯವರೇ ಭೂಗತ ಜಗತ್ತಿನ ರೀತಿಯ ವರ್ತನೆಗಳು ನಿಮಗೆ ಅನಿವಾರ್ಯ ಎಂದಾದರೆ ಸಾರ್ವಜನಿಕ ಜೀವನ ಬಿಟ್ಟುಬಿಡಿ ಹೇಳಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ದರ್ಪದ ವರ್ತನೆ ಹಲವಾರು ಬಾರಿ ಸಾಬೀತುಗೊಂಡಿದೆ. ವ್ಯಕ್ತಿಯೊಬ್ಬರು ಕರೆ ಮಾಡಿ ವಿದ್ಯುತ್ ಸಮಸ್ಯೆ ಹೇಳಿದಾಗ ಅವರ ಮೇಲೆ ರೇಗಾಡಿ, ಮಧ್ಯ ರಾತ್ರಿಯಲ್ಲಿ ಮನೆಯ ಹೆಂಚು ತೆಗೆದು ಮನೆಯೊಳಗೆ ಇಳಿದು ಬಂಧಿಸುವಷ್ಟರ ಮಟ್ಟಿಗೆ ಅಧಿಕಾರಿಗಳಿಗೆ ಡಿಕೆಶಿ ಒತ್ತಡ ನೀಡಿದ್ದರು ಎಂದಿದೆ.