ನರೇಂದ್ರ ಮೋದಿ(Narendra Modi ) ನೇತೃತ್ವದ ಕೇಂದ್ರ ಸರ್ಕಾರದ(Central Government) ಎಲ್ಲ ನಿರ್ಧಾರಗಳನ್ನು ಟೀಕಿಸುವ ಮೂಲಕ ಮತ್ತು ನಿರಂತರವಾಗಿ ಸರ್ಕಾರದ ಕಾರ್ಯವೈಖರಿಯ ವಿರುದ್ದ ವಾಗ್ದಾಳಿ ನಡೆಸುವ ಮೂಲಕ ದೇಶದಲ್ಲಿ ವಿಪಕ್ಷಗಳು ನಕಾರಾತ್ಮಕ ಮನಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ.

ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕನ್ನಡದ ಖ್ಯಾತ ಕಾದಂಬರಿಕಾರ(Kannada Literature) ಎಸ್.ಎಲ್ ಭೈರಪ್ಪ(SL Bairappa) ಅಭಿಪ್ರಾಯಪಟ್ಟರು. ಮಹಾರಾಷ್ಟ್ರದ(Maharashtra) ಥಾಣೆಯಲ್ಲಿ(Thane) ನಡೆದ ಸಾಹಿತ್ಯ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳು ಸಕಾರಾತ್ಮಕವಾಗಿ ಮಾತನಾಡುವ ಮನಸ್ಥಿತಿಯನ್ನು ಕಳೆದುಕೊಂಡಿವೆ. ಸರ್ಕಾರದ ಎಲ್ಲ ನಿರ್ಧಾರಗಳ ವಿರುದ್ದ ವಾಗ್ದಾಳಿ ನಡೆಸುತ್ತವೆ. ಭಾರತ ಸರ್ಕಾರ ಪಾಕಿಸ್ತಾನದ ವಿರುದ್ದ ಸರ್ಜಿಕಲ್ ದಾಳಿ ನಡೆಸಿದಾಗ, ದಾಳಿ ನಡೆಸಿರುವುದಕ್ಕೆ ಸಾಕ್ಷಿ ಒದಗಿಸಿ ಎಂದು ಕೇಳುವ ಮೂಲಕ ವಿಪಕ್ಷಗಳು ದೇಶವನ್ನು ಅವಮಾನಿಸಿವೆ.
ದೇಶದ ಸೇನೆ ನಡೆಸಿದ ದಾಳಿಯ ಬಗ್ಗೆ ಸಾಕ್ಷಿ ಕೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇನ್ನು ದೇಶದಲ್ಲಿ ವಿಪಕ್ಷಗಳು ಹೇಳುತ್ತಿರುವ ಜಾತ್ಯಾತೀತ ರಾಜಕಾರಣವು ‘ಜಾತಿವಾದಿ ರಾಜಕೀಯ’ದಿಂದ ಕೂಡಿದೆ. ಎಲ್ಲ ಪಕ್ಷಗಳು ಜಾತಿ ಆಧಾರದ ಮೇಲೆ ಮತ ಕೇಳುವ ಮೂಲಕ ಪರೋಕ್ಷವಾಗಿ ಜಾತಿವಾದಿ ರಾಜಕಾರಣವನ್ನು ಪ್ರೋತ್ಸಾಹಿಸುತ್ತಿವೆ. ದೇಶದಲ್ಲಿ ಬಹುತೇಕ ಪ್ರಾದೇಶಿಕ ಪಕ್ಷಗಳು ಜಾತಿಯನ್ನಾಧರಿಸಿಯೇ ರಾಜಕೀಯ ಮಾಡುತ್ತಿವೆ. ಆದರೆ ಗುಜರಾತ್ ರಾಜ್ಯದಲ್ಲಿ ಮಾತ್ರ ಜಾತಿ ರಾಜಕೀಯ ಇಂದು ಅಸ್ತಿತ್ವ ಕಳೆದುಕೊಂಡಿದೆ. ಗುಜರಾತ್‍ನಲ್ಲಿ ಜಾತಿ ರಾಜಕೀಯವಿಲ್ಲ.

ಅತ್ಯಂತ ಸಣ್ಣ ಜಾತಿಯ ನರೇಂದ್ರ ಮೋದಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ನಂತರ ಆ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜಾತಿ ರಾಜಕೀಯದಿಂದ ಗುಜರಾತ ದೂರ ಇರುವ ಪರಿಣಾಮ ಗುಜರಾತ ಹೆಚ್ಚು ಅಭಿವೃದ್ದಿ ಸಾಧಿಸಿದೆ. ಜಾತಿರಾಜಕೀಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಕಿಡಿಕಾರಿದರು. ಇನ್ನು ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪನವರು 25 ಕಾದಂಬರಿಗಳನ್ನು ಬರೆದಿದ್ದು, ಅವರ ಬಹುತೇಕ ಎಲ್ಲ ಕಾದಂಬರಿಗಳು,
ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಪದ್ಮಶ್ರೀ, ಸರಸ್ವತಿ ಸನ್ಮಾನ್ ಸೇರಿದಂತೆ ಅನೇಕ ರಾಷ್ಟ್ರೀಯ ಪುರಸ್ಕಾರಗಳು ಲಭಿಸಿವೆ.