ಕ್ಯಾಲಿಫೋರ್ನಿಯಾದಲ್ಲಿ ಭೀಕರ ಬಿ-52 ಬಾಂಬರ್ (B 52 bomber flight crash) ವಿಮಾನ ದುರಂತ; ಎಂಟು ಮಂದಿ ದುರ್ಮರಣ
ಪರೀಕ್ಷಾ ಹಾರಾಟದ ವೇಳೆ ಸಂಭವಿಸಿದ ಅಪಘಾತ
ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳ ತುರ್ತು ಕಾರ್ಯಾಚರಣೆ
California: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ (B 52 bomber flight crash) ಭೀಕರ ವಿಮಾನ ದುರಂತವು ಜಗತ್ತಿನ ಗಮನ ಸೆಳೆದಿದೆ.
ಅಮೆರಿಕದ ಪ್ರಮುಖ ವಾಯುಪಡೆಯ ಪರೀಕ್ಷಾ ಕೇಂದ್ರವಾದ ಎಡ್ವರ್ಡ್ಸ್ (Edwards) ವಾಯುನೆಲೆಯಿಂದ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಬಿ-52 ಸ್ಟ್ರಾಟೋಫೋರ್ಟ್ರೆಸ್
(Strato Fortress) ಬಾಂಬರ್ ವಿಮಾನ ಪತನಗೊಂಡಿದೆ. ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ ಎಂಟು ಮಂದಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿಸಿದೆ.

ಸ್ಥಳೀಯ ಕಾಲಮಾನ ಪ್ರಕಾರ ಸೋಮವಾರ ಬೆಳಿಗ್ಗೆ ಸುಮಾರು 11:20ರ ವೇಳೆಗೆ ಈ ಅಪಘಾತ (B 52 bomber flight crash) ಸಂಭವಿಸಿದ್ದು, ಅಪಘಾತದ ತೀವ್ರತೆಯಿಂದಾಗಿ ಯಾರೂ ಬದುಕುಳಿಯಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಿಮಾನವು ದಿನನಿತ್ಯದ ಪರೀಕ್ಷಾ ಕಾರ್ಯಾಚರಣೆಯ ಭಾಗವಾಗಿ ಹಾರಾಟ ನಡೆಸುತ್ತಿತ್ತು.
ಟೇಕ್‌ಆಫ್ (Takeoff) ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ತಕ್ಷಣವೇ ತುರ್ತು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು.
ಅಪಘಾತದ ಬಳಿಕ ಘಟನಾ ಸ್ಥಳದಲ್ಲಿ ದಟ್ಟ ಕಪ್ಪು ಹೊಗೆ ಆವರಿಸಿಕೊಂಡಿದ್ದು, ಅಗ್ನಿಶಾಮಕ ಹಾಗೂ ರಕ್ಷಣಾ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿದರು.
ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿವೆ.
ಈ ದುರಂತದ ನಂತರ ಎಡ್ವರ್ಡ್ಸ್ ವಾಯುನೆಲೆಯನ್ನು ತಕ್ಷಣವೇ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ವಾಯುನೆಲೆಯತ್ತ ಬರುತ್ತಿದ್ದ ಇತರ ವಿಮಾನಗಳನ್ನು ಬೇರೆ ಪ್ರದೇಶಗಳಿಗೆ ಮರುನಿರ್ದೇಶಿಸಲಾಯಿತು.
ರಕ್ಷಣಾ ಮತ್ತು ತನಿಖಾ ಕಾರ್ಯಾಚರಣೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಸಾಮಾನ್ಯ ಸಂದರ್ಶಕರ ಪ್ರವೇಶ ಹಾಗೂ ವಾಣಿಜ್ಯೇತರ ಅನುಮತಿ ಪಾಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ತಿಳಿಯಲು ಅಮೆರಿಕದ ವಾಯುಪಡೆ ಹಾಗೂ ಸಂಬಂಧಿತ ತನಿಖಾ ಸಂಸ್ಥೆಗಳು ಸಮಗ್ರ ಪರಿಶೀಲನೆ ಆರಂಭಿಸಿವೆ.
ಬಿ-52 ಸ್ಟ್ರಾಟೋಫೋರ್ಟ್ರೆಸ್ ಅಮೆರಿಕದ ಅತ್ಯಂತ ಶಕ್ತಿಶಾಲಿ ದೀರ್ಘ ಶ್ರೇಣಿಯ ಬಾಂಬರ್ ವಿಮಾನಗಳಲ್ಲಿ ಒಂದಾಗಿದೆ. 1955ರಿಂದ ಅಮೆರಿಕದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ವಿಮಾನವನ್ನು ಸಾಂಪ್ರದಾಯಿಕ ಹಾಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಸಾಗಿಸಲು ಬಳಸಲಾಗುತ್ತದೆ.
ಹಲವು ದಶಕಗಳಿಂದ ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ವಿಮಾನವು ಅತ್ಯಾಧುನಿಕ ಸಾಮರ್ಥ್ಯ ಹೊಂದಿದ್ದರೂ, ಇಂತಹ ಅಪಘಾತಗಳು ಸುರಕ್ಷತಾ ಕ್ರಮಗಳ ಕುರಿತು ಹೊಸ ಪ್ರಶ್ನೆಗಳನ್ನು ಎಬ್ಬಿಸುತ್ತವೆ.
ಅದರಲ್ಲೂ ತರಬೇತಿ ಮತ್ತು ಪರೀಕ್ಷಾ ಕಾರ್ಯಾಚರಣೆಗಳ ವೇಳೆ ಸಂಭವಿಸುವ ದುರಂತಗಳು ಸೇನಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತವೆ.
ಈ ದುರ್ಘಟನೆ ಅಮೆರಿಕದ ರಕ್ಷಣಾ ವ್ಯವಸ್ಥೆಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅಧಿಕಾರಿಗಳು, ತನಿಖೆಯ ಸಂಪೂರ್ಣ ವರದಿ ಹೊರಬರುವವರೆಗೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರಬಾರದು ಎಂದು ತಿಳಿಸಿದ್ದಾರೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ವಿಶ್ವದ ಅತ್ಯಂತ ಬಲಿಷ್ಠ ಸೇನಾ ಶಕ್ತಿಯೊಂದಾದ ಅಮೆರಿಕವೂ ಇಂತಹ ಅಪಘಾತಗಳಿಂದ ಸಂಪೂರ್ಣ ಮುಕ್ತವಾಗಿಲ್ಲ ಎಂಬುದು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಇದನ್ನು ಓದಿ : https://vijayatimes.com/womens-t20-world-cup-2026-india-clinch-a-huge-win/