ಹೊಸದಿಲ್ಲಿ, ಜು. 22: ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದು, ಭಾರತಕ್ಕೆ ವಾಪಸ್ಸಾಗಿದ್ದಾರೆ.
ಅತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಹಿನ್ನೆಲೆ ಆಂಗ್ಲರ ನಾಡಿಗೆ ತೆರಳಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಯುವ ಆಟಗಾರ ಶುಭ್ಮನ್ ಗಿಲ್, ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದ ಚೇತರಿಸಿಕೊಳ್ಳಲು ಕನಿಷ್ಠ ಮೂರು ತಿಂಗಳು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ತಮ್ಮ ಪ್ರವಾಸ ಮೊಟಕುಗೊಳಿಸಿರುವ ಗಿಲ್, ತವರಿಗೆ ವಾಪಸ್ಸಾಗಿದ್ದಾರೆ.
ಭಾರತಕ್ಕೆ ವಾಪಸ್ಸಾಗುತ್ತಿರುವ ಬಗ್ಗೆ ಶುಭ್ಮನ್ ಗಿಲ್, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಎರಡು ಫೋಟೋ ಶೇರ್ ಮಾಡಿದ್ದು, ಒಂದರಲ್ಲಿ ವಿಮಾನ ನಿಲ್ದಾಣದ ರನ್ ವೇ ಇದ್ದರೆ, “ವೆಲ್ಕಮ್ ಹೋಂ ಶುಬ್ಬಿ” ಎಂದು ಬರೆದಿರುವ ಕೇಕ್ ಫೋಟೋವನ್ನು ಸಹ ಶೇರ್ ಮಾಡಿದ್ದಾರೆ.
ಕಳೆದ ಜೂನ್ ನಲ್ಲಿ ಇಂಗ್ಲೆಂಡ್ನ ಸೌತ್ಹ್ಯಾಂಪ್ಟನ್ ನಲ್ಲಿ ನ್ಯೂಜಿ಼ಲೆಂಡ್ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಭಾರತದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಶುಭ್ಮನ್‌ಗಿಲ್, ಎರಡು ಇನ್ನಿಂಗ್ಸ್ ನಲ್ಲಿ ಕ್ರಮವಾಗಿ 28 ಮತ್ತು 8 ರನ್ ಗಳಿಸಿದ್ದರು. ಸದ್ಯ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ತಯಾರಿ ಆರಂಭಿಸಿದ್ದು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ 4ರಂದು ಆರಂಭವಾಗಲಿದೆ.