ಲಖನೌ, ಡಿ. 07: ಬಿಲ್ಡರ್‌ಗಳು ಮತ್ತು ಮನೆ ಖರೀದಿದಾರರ ನಡುವೆ ವಿಶ್ವಾಸ ಮೂಡಿಸುವುದು ಮತ್ತು ಸಮಸ್ಯೆಗಳನ್ನು ನಿವಾರಿಸುವ ಕ್ರಮವಾಗಿ ರೆರಾ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆಗ್ರಾ ಮೆಟ್ರೊ ಯೋಜನೆಗೆ ಚಾಲನೆ ನೀಡಿದ ಅವರು, ದುರುದ್ದೇಶ ಚಿಂತನೆಯ ಜನರು ರಿಯಲ್ ಎಸ್ಟೇಟ್ ವಲಯಕ್ಕೆ ಕೆಟ್ಟ ಹೆಸರು ತಂದಿದ್ದರು. ಇದರಿಂದ ಮಧ್ಯಮ ವರ್ಗದ ಜನರು ಭ್ರಮನಿರಸನಗೊಂಡಿದ್ದರು ಎಂದರು.
ವಸತಿ ನಿರ್ಮಾಣಗಾರರು ಮತ್ತು ಗ್ರಾಹಕರ ನಡುವೆ ವಿಶ್ವಾಸದ ಕೊರತೆ ಇತ್ತು. ಈ ಕೊರತೆ ನೀಗಿಸಲು ರೆರಾ ತರಲಾಗಿದೆ. ವರದಿಗಳ ಪ್ರಕಾರ, ಕಾಯ್ದೆ ಜಾರಿಗೊಂಡ ಬಳಿಕ ಮಧ್ಯಮ ವರ್ಗದ ಮನೆಗಳು ತ್ವರಿತವಾಗಿ ನಿರ್ಮಾಣಗೊಳ್ಳುತ್ತಿವೆ ಎಂದರು.
ಆಧುನಿಕ ಸಾರಿಗೆ ವ್ಯವಸ್ಥೆಯಿಂದ ವಸತಿ ಯೋಜನೆವರಿಗೆ ಸಮಗ್ರ ಅಭಿವೃದ್ಧಿಯಿಂದ ಮಾತ್ರವೇ ನಗರ ಜೀವನ ಸುಲಲಿತವಾಗಲಿದೆ ಎಂದರು.ಪ್ರಧಾನಮಂತ್ರಿ ಆವಾಸ್ ಯೋಜನಾದಡಿ ಸುಮಾರು ಒಂದು ಕೋಟಿ ಮನೆಗಳನ್ನು ನಗರ ಪ್ರದೇಶದ ಬಡಜನರಿಗೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ ನಗರ ಪ್ರದೇಶದಲ್ಲಿ ಬಡಜನರಿಗೆ ಮನೆ ಖರೀದಿಸಲು ಆರ್ಥಿಕ ನೆರವು ನೀಡಲಾಗುತ್ತಿದೆ. ಇದುವರೆಗೆ ಸುಮಾರು 12 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಮನೆ ಖರೀದಿಗಾಗಿ ₹ 28 ಸಾವಿರ ಕೋಟಿ ಒದಗಿಸಲಾಗಿದೆ ಎಂದರು.
20ನೇ ಶತಮಾನದಲ್ಲಿ ಮೆಟ್ರೊ ನಗರಗಳು ವಹಿಸಿದ ಪಾತ್ರವನ್ನು ಈಗ ಆಗ್ರಾದಂತಹ ಮಧ್ಯಮ ಕ್ರಮದ ನಗರಗಳು ನಿರ್ವಹಿಸುತ್ತಿವೆ. ನೂರಾರು ವರ್ಷಗಳ ಇತಿಹಾಸವುಳ್ಳ ಆಗ್ರಾ ಇದು 21ನೇ ಶತಮಾನದ ಅಗತ್ಯಗಳಿಗೆ ಹೊಂದಿಕೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದರು.