ಕುಂದಾಪುರ, ಜ. 01: ಬಾಲಕಿಯ ವಿವಾಹ ತಯಾರಿ ನಡೆದು, ಇನ್ನೇನು ವಿವಾಹ ಆಗಬೇಕು ಅನ್ನುವಷ್ಟರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಗಮಿಸಿ ಬಾಲ್ಯವಿವಾಹ ಒಂದನ್ನು ನಿಲ್ಲಿಸಿರುವ ಘಟನೆ ಕುಂದಾಪುರ ಸಮೀಪದ ತಲ್ಲೂರು ಗುಡ್ಡಂಗಡಿಯಲ್ಲಿ ನಡೆದಿದೆ. ತ್ರಾಸಿಯ ಮಹಾಗಣಪತಿ ಸಭಾಂಗಣದಲ್ಲಿ ಈ ಬಾಲ್ಯವಿವಾಹ ನಡೆಸಲು ಎಲ್ಲಾ ಸಿದ್ದತೆಗಳನ್ನು ನಡೆಸಲಾಗಿತ್ತು.
ಗುಡ್ಡಂಗಡಿ ಗ್ರಾಮದ 17 ವರ್ಷದ ಬಾಲಕಿಯನ್ನು 28 ವರ್ಷದ ವರನೊಂದಿಗೆ ಮದುವೆ ಮಾಡಲು ಎರಡೂ ಕಡೆಯ ಸಂಬಂಧಿಕರು ಒಪ್ಪಿದ್ದರು. ಮದುವೆ ಸಮಾರಂಭಕ್ಕಾಗಿ 200 ಕ್ಕೂ ಹೆಚ್ಚು ಜನರು ಈ ಸಭಾಂಗಣದಲ್ಲಿ ಜಮಾಯಿಸಿದ್ದರು. ಈ ಅಕ್ರಮ ವಿವಾಹದ ಬಗ್ಗೆ ಮಾಹಿತಿ ದೊರೆತ ಕೂಡಲೇ ಉಡುಪಿ ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕದ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗದ ಅಧಿಕಾರಿಗಳು, ಗಂಗೊಳ್ಳಿಯ ಪೊಲೀಸ್ ಸಿಬ್ಬಂದಿ ಮತ್ತು ತ್ರಾಸಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮದುವೆ ಮಂಟಪಕ್ಕೆ ಧಾವಿಸಿ ವಿವಾಹವನ್ನು ನಿಲ್ಲಿಸಿದ್ದಾರೆ.
ಎರಡೂ ಕುಟುಂಬದವರಿಗೆ ಬಾಲ್ಯ ವಿವಾಹದ ಪರಿಣಾಮದ ಬಗೆಗೆ ಜಾಗೃತಿ ಮೂಡಿಸಿದ ಅಧಿಕಾರಿಗಳು ಕಾನೂನು ನಿಬಂಧನೆಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದರು ಮತ್ತು ಕುಟುಂಬ ಸದಸ್ಯರು, ಹಾಲ್ ಮಾಲೀಕರು ಮತ್ತು ಪುರೋಹಿತರಿಂದ ಬಾಂಡ್‌ಗಳನ್ನು ಬರೆಸಿಕೊಳ್ಳಲಾಯಿತು. ಸಭಾಂಗಣದಲ್ಲಿ ನೆರೆದಿದ್ದ ಜನರನ್ನು ಮನೆಗೆ ವಾಪಸ್ ಕಳುಹಿಸಲಾಯಿತು.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಕಣ್ಗಾವಲು ಅಧಿಕಾರಿ ಪ್ರಭಾಕರ್ ಆಚಾರ್, ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ ಶೋಭಾ ಶೆಟ್ಟಿ ಮತ್ತಿತರರು ಹಾಜರಿದ್ದರು.