- ವಾರಕ್ಕೆ 5 ದಿನ ಕೆಲಸ (Bank staff strike) ಬೇಡಿಕೆ: ಬ್ಯಾಂಕ್ ಸಿಬ್ಬಂದಿ ಮುಷ್ಕರ
- ಜ.24ರಿಂದ ಜ.27ರವರೆಗೆ ನಿರಂತರ ನಾಲ್ಕು ದಿನ ಬ್ಯಾಂಕ್ ಬಂದ್
- ಎಟಿಎಂ, ಯುಪಿಐ, ಇಂಟರ್‌ನೆಟ್ ಬ್ಯಾಂಕಿಂಗ್‌ಗೆ ತೊಂದರೆ ಇಲ್ಲ
New Delhi: ಜನವರಿ 24ರಿಂದ ಆರಂಭವಾಗಿ ನಾಲ್ಕು ದಿನಗಳ ಕಾಲ ದೇಶದಾದ್ಯಂತ (Bank staff strike) ಬ್ಯಾಂಕ್‌ಗಳ ಶಾಖೆಗಳು ಮುಚ್ಚಿರುವ ಸಾಧ್ಯತೆ ಇದೆ.
ಬ್ಯಾಂಕ್ ಸಿಬ್ಬಂದಿ ವಾರಕ್ಕೆ ಐದು ದಿನ ಮಾತ್ರ ಕೆಲಸ ಹಾಗೂ ಎರಡು ದಿನ ರಜೆ ನೀಡಬೇಕೆಂಬ ಬೇಡಿಕೆ ಇಟ್ಟುಕೊಂಡು ಜನವರಿ 27ರಂದು ರಾಷ್ಟ್ರಮಟ್ಟದ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಈ ಮುಷ್ಕರದ ಜೊತೆಗೆ ಈಗಾಗಲೇ ಇರುವ ಸರ್ಕಾರಿ ಹಾಗೂ ವಾರಾಂತ್ಯ ರಜೆಯ ಕಾರಣದಿಂದಾಗಿ ನಿರಂತರ ನಾಲ್ಕು ದಿನ ಬ್ಯಾಂಕಿಂಗ್ (Banking) ವ್ಯವಹಾರಗಳಿಗೆ ವ್ಯತ್ಯಯ ಉಂಟಾಗಲಿದೆ. ಇದರಿಂದ ಗ್ರಾಹಕರು ಮುಂಚಿತವಾಗಿಯೇ ಹಣಕಾಸು ಯೋಜನೆ ಮಾಡಿಕೊಂಡುಕೊಳ್ಳುವುದು ಅಗತ್ಯವಾಗಿದೆ.

ಈ ನಾಲ್ಕು ದಿನಗಳ ಬ್ಯಾಂಕ್ ಬಂದ್‌ಗೆ ಕಾರಣವಾಗಿರುವ ದಿನಾಂಕಗಳನ್ನು (Bank staff strike) ಗಮನಿಸಿದರೆ, ಜನವರಿ 24ರಂದು ನಾಲ್ಕನೇ ಶನಿವಾರವಾದ್ದರಿಂದ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಜನವರಿ 25 ಭಾನುವಾರವಾಗಿದ್ದು, ಸಾಮಾನ್ಯವಾಗಿ ಎಲ್ಲಾ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಜನವರಿ 26ರಂದು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ಸರ್ಕಾರಿ ರಜೆ ಘೋಷಿಸಲಾಗಿದೆ.
ಇದಾದ ನಂತರ ಜನವರಿ 27ರಂದು ಬ್ಯಾಂಕ್ ಸಿಬ್ಬಂದಿ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರಮಟ್ಟದ ಮುಷ್ಕರ ನಡೆಯಲಿದೆ. ಈ ನಾಲ್ಕು ದಿನಗಳ ಅವಧಿಯಲ್ಲಿ ಬ್ಯಾಂಕ್ ಶಾಖೆಗಳಲ್ಲಿ ಯಾವುದೇ ನೇರ ಸೇವೆಗಳು ಲಭ್ಯವಿರುವುದಿಲ್ಲ.
ಬ್ಯಾಂಕ್ ಬಂದ್‌ನ ಪರಿಣಾಮವಾಗಿ ಹಣ ವಹಿವಾಟು, ಚೆಕ್ ಕ್ಲಿಯರೆನ್ಸ್ (Check clearance) , ಡಿಮ್ಯಾಂಡ್ ಡ್ರಾಫ್ಟ್, ಪಾಸ್‌ಬುಕ್ ಎಂಟ್ರಿ (Passbook Entry) , ಲಾಕರ್ ಸೇವೆ ಸೇರಿದಂತೆ ಹಲವು ಪ್ರಮುಖ ವ್ಯವಹಾರಗಳು ಸ್ಥಗಿತಗೊಳ್ಳಲಿವೆ.
ವಿಶೇಷವಾಗಿ ಚೆಕ್ ಮೂಲಕ ಪಾವತಿ ಮಾಡಿಕೊಳ್ಳುವವರು ಹಾಗೂ ಶಾಖೆ ಆಧಾರಿತ ಸೇವೆಗಳ ಮೇಲೆ ಅವಲಂಬಿತರಾಗಿರುವ ಗ್ರಾಹಕರು ಹೆಚ್ಚಿನ ಅಸೌಕರ್ಯ ಅನುಭವಿಸುವ ಸಾಧ್ಯತೆ ಇದೆ. ವ್ಯಾಪಾರಿಗಳು, ಸಣ್ಣ ಉದ್ಯಮಿಗಳು ಮತ್ತು ಹಿರಿಯ ನಾಗರಿಕರು ಈ ಅವಧಿಯಲ್ಲಿ ತಮ್ಮ ಹಣಕಾಸು ಅಗತ್ಯಗಳನ್ನು ಮುಂಚಿತವಾಗಿಯೇ ವ್ಯವಸ್ಥೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಆದರೆ ಗ್ರಾಹಕರಿಗೆ ಸ್ವಲ್ಪ ಸಮಾಧಾನ ನೀಡುವ ವಿಷಯವೆಂದರೆ, ಈ ನಾಲ್ಕು ದಿನಗಳಲ್ಲೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ.
ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್ (Internet Banking) , ಯುಪಿಐ ಪಾವತಿಗಳು ಹಾಗೂ ಎಟಿಎಂ ಸೇವೆಗಳಿಗೆ ಯಾವುದೇ ಅಡಚಣೆ ಇರುವುದಿಲ್ಲ. ಹಣ ವರ್ಗಾವಣೆ, ಬಿಲ್ ಪಾವತಿ, ಆನ್‌ಲೈನ್ ಶಾಪಿಂಗ್ (Online Shopping) , ರೀಚಾರ್ಜ್ ಸೇರಿದಂತೆ ಡಿಜಿಟಲ್ ವ್ಯವಹಾರಗಳನ್ನು ಗ್ರಾಹಕರು ಸಾಮಾನ್ಯವಾಗಿ ಬಳಸಬಹುದು.
ಆದ್ದರಿಂದ ನಗದು ಅಗತ್ಯವಿರುವವರು ಮಾತ್ರ ಮುಂಚಿತವಾಗಿ ಎಟಿಎಂ ಅಥವಾ ಬ್ಯಾಂಕ್ ಶಾಖೆಗಳಿಂದ ಹಣ ತೆಗೆದುಕೊಳ್ಳುವುದು ಒಳಿತು.
ಭಾರತದ ವಿಶಾಲವಾದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಾರಕ್ಕೆ ಐದು ದಿನ ಮಾತ್ರ ಕೆಲಸದ ವ್ಯವಸ್ಥೆಯನ್ನು ಜಾರಿಗೆ ತರುವುದು ಸುಲಭವಲ್ಲ ಎಂಬ ಅಭಿಪ್ರಾಯವೂ ಇದೆ.
ಪ್ರಸ್ತುತ ತಿಂಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾದಿನಗಳಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಈಗ ಬ್ಯಾಂಕ್ ಸಿಬ್ಬಂದಿ ವಾರಕ್ಕೆ ಎರಡು ದಿನ ಕಡ್ಡಾಯ ರಜೆ ನೀಡಲೇಬೇಕು ಎಂಬ ನಿಲುವಿನಲ್ಲಿ ಮುಷ್ಕರದ ಹಾದಿ ಹಿಡಿದಿದ್ದಾರೆ.
ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಬ್ಯಾಂಕ್ ಆಡಳಿತ ಮಂಡಳಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಾದ ಸಂಗತಿ.
ಇತ್ತ ಗ್ರಾಹಕರು ಅನಗತ್ಯ ತೊಂದರೆ ತಪ್ಪಿಸಿಕೊಳ್ಳಲು ಇಂದೇ ಬ್ಯಾಂಕ್ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬೇಕು ಇಲ್ಲವೇ ಜ.27 ರ ನಂತರದಲ್ಲಿ ಬ್ಯಾಂಕ್ಗೆ ಭೇಟಿ ನೀಡಬೇಕಿದೆ.