- ಬಳ್ಳಾರಿಯಲ್ಲಿ ಬ್ಯಾನರ್ ವಿವಾದದಲ್ಲಿ (banner controversy in bellary) ಕಾಂಗ್ರೆಸ್ ಕಾರ್ಯಕರ್ತ ಸಾವು
- ಎರಡು ರಾಜಕೀಯ ಬಣಗಳ ನಡುವೆ ಕಲ್ಲು ತೂರಾಟ; ಗುಂಡಿನ ದಾಳಿ
- ಬ್ಯಾನರ್ ಅಳವಡಿಕೆ ವಿಚಾರಕ್ಕೆ ಹಿಂಸಾಚಾರ; ಸೆಕ್ಷನ್ 144 ಜಾರಿ, ಸಾವಿರಕ್ಕೂ ಹೆಚ್ಚು ಪೊಲೀಸ್ ನಿಯೋಜನೆ
Bellary: ಬಳ್ಳಾರಿ ನಗರದಲ್ಲಿ ರಾಜಕೀಯ ಬ್ಯಾನರ್ (Banner) ಅಳವಡಿಕೆ ವಿಚಾರ ಗಂಭೀರ (banner controversy in bellary) ಘರ್ಷಣೆಗೆ ಕಾರಣವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತನೊಬ್ಬರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಗುರುವಾರ ರಾತ್ರಿ ನಡೆದ ಈ ಘಟನೆಯಿಂದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಹಿನ್ನೆಲೆ ನಗರದೆಲ್ಲೆಡೆ ಬ್ಯಾನರ್ ಅಳವಡಿಸಲಾಗುತ್ತಿದ್ದು, ಇದೇ ವೇಳೆ ಶಾಸಕ ನಾರಾ ಭರತ್ ರೆಡ್ಡಿ (Nara Bharat Reddy) ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಬೆಂಬಲಿಗರ ನಡುವೆ ಸಂಘರ್ಷ ಉಂಟಾಗಿದೆ.
ಆರಂಭದಲ್ಲಿ ಮಾತಿನ ಚಕಮಕಿ ನಡೆದಿದ್ದು, ನಂತರ ಪರಿಸ್ಥಿತಿ ನಿಯಂತ್ರಣ ತಪ್ಪಿ ಕಲ್ಲು (banner controversy in bellary) ತೂರಾಟ ಹಾಗೂ ಫೈರಿಂಗ್ ಆರೋಪಗಳಿಗೂ ದಾರಿ ಮಾಡಿಕೊಟ್ಟಿದೆ.
ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕ ಭರತ್ ರೆಡ್ಡಿ, “ಜನಾರ್ದನ ರೆಡ್ಡಿ ಬೆಂಬಲಿಗರ ದಾಳಿಯಿಂದಲೇ ನಮ್ಮ ಪಕ್ಷದ ಕಾರ್ಯಕರ್ತನ ಪ್ರಾಣ ಕಳೆದುಕೊಂಡಿದ್ದಾರೆ.
ಗುಂಡು ತಗುಲಿದ ಪರಿಣಾಮ ಈ ಸಾವು ಸಂಭವಿಸಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಘರ್ಷಣೆಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿ ಹಲವರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕ ಸಂಚಾರಕ್ಕೂ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ.
ಇನ್ನು ಈ ಘಟನೆಗೆ ಸಂಬಂಧಿಸಿ ಜನಾರ್ದನ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ತಮ್ಮ ಮೇಲಿನ ಆರೋಪಗಳನ್ನು ತೀವ್ರವಾಗಿ ತಳ್ಳಿಹಾಕಿದ್ದಾರೆ.
“ಬ್ಯಾನರ್ ವಿಚಾರವನ್ನು ನೆಪ ಮಾಡಿಕೊಂಡು ನನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ.
ಗಂಗಾವತಿಯಿಂದ ಬಂದ ತಕ್ಷಣ ನನ್ನ ನಿವಾಸದ ಎದುರೇ ಗನ್ ಮ್ಯಾನ್‌ಗಳಿಂದ ಗುಂಡಿನ ದಾಳಿ ನಡೆಸಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.
ಮಾಧ್ಯಮಗಳ ಎದುರು ಫೈರಿಂಗ್ ವೇಳೆ ಬಿದ್ದ ಗುಂಡನ್ನು ತೋರಿಸಿದ ಅವರು, ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ಹೆಸರಿನಲ್ಲಿ ನಗರದಲ್ಲಿ ಅಶಾಂತಿ ಸೃಷ್ಟಿಸಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಆರೋಪ–ಪ್ರತ್ಯಾರೋಪಗಳಿಂದ ಬಳ್ಳಾರಿ ರಾಜಕೀಯ ವಾತಾವರಣ ಮತ್ತಷ್ಟು ಬಿಗಡಾಯಿಸಿದೆ.
ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಬ್ಯಾನರ್ ಗಲಾಟೆ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಬ್ರೂಸ್ ಪೇಟೆ (Bruce Township) ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜನಾರ್ದನ ರೆಡ್ಡಿಯನ್ನು ಎ1 ಆರೋಪಿ ಎಂದು ಉಲ್ಲೇಖಿಸಲಾಗಿದೆ. ಅವರೊಂದಿಗೆ ಸೋಮಶೇಖರ್ ರೆಡ್ಡಿ, ಶ್ರೀರಾಮುಲು (Sriramulu) ಸೇರಿದಂತೆ ಇತರರ ಹೆಸರುಗಳು ಎಫ್‌ಐಆರ್‌ನಲ್ಲಿ ಸೇರಿವೆ.
ದೂರುದಾರರ ಪ್ರಕಾರ, ಬ್ಯಾನರ್ ಕಿತ್ತು ಹಾಕಿದ ವಿಚಾರವನ್ನು ಪ್ರಶ್ನಿಸಿದಾಗ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಲಾಗಿದೆ.
ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ. ಬಳ್ಳಾರಿ ನಗರದಲ್ಲಿ ಸೆಕ್ಷನ್ 144 (Section 144) ಜಾರಿಗೊಳಿಸಲಾಗಿದ್ದು, ವಿಜಯನಗರ, ಕೊಪ್ಪಳ ಮತ್ತು ರಾಯಚೂರಿನಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಮೂರು ಎಸ್ಪಿ, 10 ಡಿವೈಎಸ್ಪಿ ಹಾಗೂ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.
ಐಜಿಪಿ ವರ್ತಿಕಾ ಕಟೀಯಾರ್ ಮತ್ತು ಎಸ್ಪಿ ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈಗ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ತಿಳಿಸಿದ್ದಾರೆ.
ಆದರೂ, ನಗರದಲ್ಲಿ ಶಾಂತಿ ಕಾಪಾಡಲು ನಾಗರಿಕರು ಸಹಕಾರ ನೀಡಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನು ಓದಿ : https://vijayatimes.com/next-budget-by-siddaramaiah/