ಬೆಂಗಳೂರು ನ 1 : ಕನ್ನಡಕ್ಕೆ ತನ್ನದೇ ಆದ ಅಂತರ್ಗತ ಶಕ್ತಿ ಇದೆ, ಅದನ್ನು ಕಡಿಮೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವು ರಾಜರು ನಮ್ಮನ್ನು ಆಳಿದರೂ ಕನ್ನಡ ತನ್ನ ಅಸ್ತಿತ್ವ ಕಾಪಾಡಿಕೊಂಡು ಗಟ್ಟಿಯಾಗಿ ನಿಂತಿದೆ. ಹಲವು ದಾಳಿಗಳನ್ನು ಕನ್ನಡ ಎದುರಿಸಿ ನಿಂತಿದೆ. ಕನ್ನಡಕ್ಕೆ ತನ್ನದೇ ಆದ ಅಂತರ್ಗತ ಶಕ್ತಿ ಇದೆ. ಇದನ್ನು ಕಡಿಮೆ ಮಾಡಲು ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಕನ್ನಡದ ರಾಜ್ಯೋತ್ಸವವನ್ನು ಸೀಮಿತವಾಗಿ ಆಚರಣೆ ಮಾಡಬೇಕಾಗಿ ಬಂದಿದೆ ಎಂದ ಅವರು, ಕನ್ನಡ ನಮ್ಮೆಲ್ಲರನ್ನು ಒಗ್ಗೂಡಿಸಿದೆ. ಅದು ಬೇರು ಇದ್ದಂತೆ. ಈ ತಾಯಿ ಬೇರನ್ನು ಸಂರಕ್ಷಣೆ ಮಾಡಿ ಅದರ ಮೂಲಕ ಪ್ರಪಂಚದಲ್ಲಿ ಅತೀ ದೊಡ್ಡ ಮರವನ್ನಾಗಿ ಮಾಡಬೇಕಿದೆ ಎಂದರು. ಮನಕುಲಕ್ಕೆ ಕನ್ನಡದ ಮಹತ್ವ ಪ್ರಯೋಜನ ಹಾಗೂ ಸ್ವಾಭಿಮಾನ ತಿಳಿಸುವ ಶತಮಾನ 21 ನೇ ಶತಮಾನಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅನುದಾನ ದುಪ್ಪಟ್ಟು ಮಾಡಲಾಗುವುದು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 3000 ಕೋಟಿ ಅನುದಾನ ನೀಡುವುದರ ಜೊತೆ ಕಿತ್ತೂರು ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದರು. ಮೈಸೂರು ಭಾಗದಲ್ಲಿ ಬಾಕಿ ಇರುವ ನಿರಾವರಿ ಯೋಜನೆ ಪೂರ್ಣಗೊಳಿಲಾಗಿವುದು ಎಂದರು.