ಮುಂಬೈ, ಏ. 16: ಕೊನೆ ಕ್ಷಣದವರೆಗೂ ರೋಚಕತೆ ಕಾಯ್ದುಕೊಂಡಿದ್ದ ಪಂದ್ಯದಲ್ಲಿ ದಿಟ್ಟ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್, ಐಪಿಎಲ್‌ನ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 3 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ 14ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯಿತು.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಬ್ಯಾಟ್ಸಮನ್‌ಗಳ ವೈಫಲ್ಯದ ನಡುವೆಯೂ ನಾಯಕ ರಿಷಬ್ ಪಂತ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನೊಂದಿಗೆ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್‌ಗಳಿಸಿತು. ಈ ಸವಾಲು ಬೆನ್ನತ್ತಿದ ರಾಜಸ್ಥಾನ, 19.4 ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್‌ಗಳಿಸುವ ಮೂಲಕ ಗೆಲುವಿನ ದಡ ಸೇರಿತು.
ಡೆಲ್ಲಿ ನೀಡಿದ ಸವಾಲು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಕಳೆಪೆಯಾಗಿತ್ತು. ಆರಂಭಿಕರಾದ ಜಾಸ್ ಬಟ್ಲರ್ 2, ಮನನ್ ವೋಹ್ರ 9 ಬಹುಬೇಗನೆ ಔಟಾದರೆ. ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ನಾಯಕ ಸಂಜೂ ಸ್ಯಾಮ್ಸನ್ 4 ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಬಳಿಕ ಕಣಕ್ಕಿಳಿದ ಶಿವಂ ದುಬೆ 2, ರಿಯಾನ್ ಪರಾಗ್ 2 ಕೂಡ ಜವಾಬ್ದಾರಿಯುತ ಆಟವಾಡುವಲ್ಲಿ ಮುಗ್ಗರಿಸಿದರು.
ಪರಿಣಾಮ ರಾಜಸ್ಥಾನ ಶತಕದ ಗಡಿದಾಟುವಷ್ಟರಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಜವಾಬ್ದಾರಿಯುತ ಆಟವಾಡಿದ ಡೇವಿಡ್ ಮಿಲ್ಲರ್ 62 ಹಾಗೂ ಕ್ರಿಸ್ ಮೋರಿಸ್ ಅಜೇಯ 36 ರನ್‌ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೆ ಕೊಂಚಮಟ್ಟಿನ ಸಾಥ್ ನೀಡಿದ ತೇವಾಟಿಯಾ 19 ಹಾಗೂ ಉನಾತ್ಕಟ್ 11 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಕೊನೆಯ ಓವರ್‌ವರೆಗೂ ಛಲ ಬಿಡದೆ ಹೋರಾಡಿದ ಮೋರಿಸ್, ಕೇವಲ 18 ಬಾಲ್‌ಗಳಲ್ಲಿ 36 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಡೆಲ್ಲಿ ಪರ ಆವೇಶ್ ಖಾನ್ 3, ಕ್ರಿಸ್ ವೋಕ್ಸ್ ಹಾಗೂ ರಬಾಡ ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ, ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆರಂಭಿಕರಾದ ಪೃಥ್ವಿ ಷಾ 2, ಶಿಖರ್ ಧವನ್ 9 ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದರೆ. ನಂತರ ಕಣಕ್ಕಿಳಿದ ರಹಾನೆ 8, ಸ್ಟಾಯ್ನಿಸ್ 0 ಸಹ ಯಾವುದೇ ಪರಿಣಾಮ ಬೀರಲಿಲ್ಲ. ಆದರೆ ನಾಯಕನ ಆಟವಾಡಿದ ರಿಷಬ್ ಪಂತ್ 51 ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಇವರಿಗೆ ಸಾಥ್ ನೀಡಿದ ಲಲಿತ್ ಯಾದವ್ 20, ಟಾಮ್ ಕರನ್ 21 ರನ್‌ಗಳಿಸಿ ತಂಡದ ಮೊತ್ತ 150ರ ಹೊಸ್ತಿಲು ತಲುಪುವಂತೆ ಮಾಡಿದರು. ರಾಜಸ್ಥಾನ್ ಪರ ಜಯದೇವ್ ಉನಾತ್ಕಟ್ 3 ಹಾಗೂ ಮುಸ್ತಫಿಜುರ್ ರಹಮಾನ್ 2 ವಿಕೆಟ್ ಪಡೆದರು.