Strict Action against Raja Canal, Lake Encroachment: BBMP Instructs Officials to Clear Encroachment
Bengaluru: ಬೆಂಗಳೂರಿನಲ್ಲಿ (Bengaluru) ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿರುವ ಕಟ್ಟಡಗಳನ್ನು ಕೂಡಲೇ ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ. ಈ ಬಗ್ಗೆ ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಮಹತ್ವದ ಸೂಚನೆ ಕೊಟ್ಟಿದ್ದಾರೆ. ಇನ್ನು ಅಧಿಕಾರಿಗಳಿಗೆ ಒತ್ತುವರಿ ತೆರವು ಮಾಡಲು ಗಡುವು ನೀಡಿದ್ದಾರೆ. ಹಾಗಾಗಿ ನವೆಂಬರ್ (November) 15ರೊಳಗೆ ನಗರದಲ್ಲಿನ ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಬಿಬಿಎಂಪಿ ಸೂಚನೆ ನೀಡಿದೆ.
ಬೃಹತ್ ಮಳೆನೀರು ಕಾಲುವೆ ಹಾಗೂ ಕೆರೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ತಹಶೀಲ್ದಾರ್ಗಳು ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆಸಿದ ಸಭೆಯಲ್ಲಿ ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಅವರು ಎಲ್ಲಾ ವಲಯ ಆಯುಕ್ತರಿಗೆ ಸೂಚನೆ ನೀಡಿ, ಈ ಗಡುವು ನೀಡಿದರು.ತಹಶೀಲ್ದಾರ್ ಅವರು ಎಲ್ಲಾ ಪ್ರಸ್ತಾವನೆಯನ್ನು ಪರಾಮರ್ಶಿಸಿ, ಆದೇಶ ಹೊರಡಿಸಬೇಕು. ಎಲ್ಲಾ ವಲಯ ಆಯುಕ್ತರು ಕೂಡಲೇ ಕ್ರಮ ಕೈಗೊಳ್ಳಬೇಕು. ರಾಜಕಾಲುವೆ ಒತ್ತುವರಿ ತೆರವು ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಎಲ್ಲ ಕೆರೆಗಳ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ದಾಖಲೆ ಬಂದ ಕೂಡಲೇ ಒತ್ತುವರಿ ತೆರವುಗೊಳಿಸಬೇಕು ಎಂದು ಸೂಚಿಸಿದ್ದಾರೆ.ಇದೇ ವೇಳೆ ಬಿಬಿಎಂಪಿ ವ್ಯಾಪ್ತಿಯ ಟೆಂಡರ್ ಶ್ಯೂರ್ ರಸ್ತೆಗಳ ಮೇಲೆ ಮತ್ತು ಬೆಸ್ಕಾಂ ಕಂಬಗಳಲ್ಲಿ ಹಾಕಿರುವ ಅನಧಿಕೃತ ಓವರ್ ಹೆಡ್ ಕೇಬಲ್ಗಳನ್ನು (Head Cable) ಕೂಡಲೇ ತೆರವುಗೊಳಿಸುವಂತೆಯೂ ಇನ್ನು ಮುಂದೆ ಹೊಸ ಕೇಬಲ್ ಅಳವಡಿಸಬೇಕಾದರೆ ಡಕ್ಟ್ ಮೂಲಕವೇ ಅಳವಡಿಸಬೇಕು. ಪಾಲಿಕೆಯ ಅನುಮತಿ ಇಲ್ಲದೇ ಯಾವುದೇ ಕೇಬಲ್ ಅಳವಡಿಸಿದರೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಬೆಸ್ಕಾಂ (BESCOM) ಕೂಡ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಕಂಬದ ಮೇಲಿನ ಕೇಬಲ್ ಅಳವಡಿಸಬಾರದು ಹಾಗೆಯೇ ನಿಗದಿತ ಅವಧಿಯಲ್ಲಿ ತೆರವುಗೊಳಿಸಬೇಕು. ನಿಗದಿತ ಹಣವನ್ನು ಪಾವತಿ ಮಾಡಿ ಡಕ್ಟ್ನಲ್ಲಿ ಅಳವಡಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.