- ದೀಪಾವಳಿ ಹಬ್ಬದಲ್ಲಿ ಪಟಾಕಿಗಳಿಂದ ದುರಂತ ಸಂಭವಿಸದಂತೆ ಸೂಕ್ತ ಕ್ರಮ
- ಪಟಾಕಿ ಸಂಗ್ರಹಣೆಗೆ ಮುಂಗಡ ಅನುಮತಿ ಇಲ್ಲ
- ಪಟಾಕಿ ಮಾರಾಟಕ್ಕೆ ಕೂಡ ಕೇವಲ 5 ದಿನಗಳ ಅವಕಾಶ
Bengaluru: ದೀಪಗಳ ಹಬ್ಬ ದೀಪಾವಳಿ (Deepavali) ಬರಲು ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ.ಪಟಾಕಿ ಸದ್ದು ಮೊಳಗಲು ಇನ್ನೇನು ಕೆಲವು ದಿನಗಳು ಬಾಕಿ ಇರುವಾಗ, ಪಟಾಕಿ ದುರಂತಗಳ ಆತಂಕದ ನಡುವೆಯೇ ನಗರ ಪೊಲೀಸ್ ಆಯುಕ್ತರು ಕಠಿಣ ಕ್ರಮಗಳ ಸೂಚನೆ ನೀಡಿದ್ದಾರೆ.
ಪ್ರತಿ ವರ್ಷವೂ ಪಟಾಕಿ ಸ್ಫೋಟ, ಅಗ್ನಿ ಅವಘಡ ಮತ್ತು ಜೀವಹಾನಿ ಘಟನೆಗಳು ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ, ಈ ಬಾರಿ ಅಧಿಕಾರಿಗಳು ಮುಂಚಿತ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಅಕ್ಟೋಬರ್ 7ರಂದು ಅಗ್ನಿಶಾಮಕ ದಳ ಹಾಗೂ ಪಟಾಕಿ ವ್ಯಾಪಾರಿಗಳೊಂದಿಗೆ ನಡೆದ ಸಭೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ (Seemanth Kumar Singh) ಮಾತನಾಡಿ, ಪಟಾಕಿ ಸಂಗ್ರಹಣೆ ಮತ್ತು ಮಾರಾಟದ ಕುರಿತು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ .
ಇನ್ನು ಹಿಂದಿನ ವರ್ಷ ಅತ್ತಿಬೆಲೆ (Attibele) ಹಾಗೂ ನಗರದ ಮಾರ್ಕೆಟ್ ಪ್ರದೇಶದಲ್ಲಿ ಸಂಭವಿಸಿದ ಪಟಾಕಿ ದುರಂತಗಳನ್ನು ಸ್ಮರಿಸಿಕೊಂಡ ಅವರು, ಈ ಬಾರಿ ಅಂತಹ ಘಟನೆಗಳು ಮರುಕಳಿಸದಂತೆ ಪೂರ್ವ ತಯಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ಸಲ ಯಾವುದೇ ಪಟಾಕಿ ವ್ಯಾಪಾರಿಗೂ ಮುಂಗಡವಾಗಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಂಗ್ರಹಿಸಲು ಅನುಮತಿ ಇರುವುದಿಲ್ಲ.
ಬೇಡಿಕೆ ಹೆಚ್ಚಿದೆ ಎಂಬ ನೆಪದಲ್ಲಿ ಪಟಾಕಿಗಳನ್ನು ಗೋದಾಮುಗಳಲ್ಲಿ ಅತಿಯಾಗಿ ಸಂಗ್ರಹಿಸಿಕೊಂಡರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಅತಿಯಾಗಿ ಪಟಾಕಿ ಸಂಗ್ರಹಿಸುವುದರಿಂದ ಬೆಂಕಿ ಸ್ಫೋಟಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಮುಂಚಿತವಾಗಿ ದೊಡ್ಡ ಮಟ್ಟದ ಸ್ಟಾಕ್ ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ.
ಪಟಾಕಿ ಮಾರಾಟಗಾರರು ದೀಪಾವಳಿ ಹಬ್ಬಕ್ಕೆ 5 ದಿನಗಳ ಮುಂಚಿತವಾಗಿ ಪಟಾಕಿಗಳನ್ನು ತಂದು ಮಾರಾಟ ಮಾಡಬಹುದು.
ಸೆಪ್ಟೆಂಬರ್ 18ರಿಂದ 22ರವರೆಗೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಈ ಅವಧಿಯಲ್ಲಿ ವ್ಯಾಪಾರಿಗಳು ತಮ್ಮ ಸ್ಟಾಕ್ ಮಾರಾಟ ಮಾಡಿ ಖಾಲಿ ಮಾಡಬೇಕು.
ಈ ನಿಯಮವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಅನಧಿಕೃತ ಪಟಾಕಿ ಸಂಗ್ರಹಣೆ ಅಥವಾ ಅನರ್ಹ ಗೋದಾಮುಗಳಲ್ಲಿ ಪಟಾಕಿಗಳನ್ನು ಇಡುವವರ ವಿರುದ್ಧ ಬೀಟ್ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುವರು.
ಪಟಾಕಿ ಸ್ಟಾಕ್ ಪತ್ತೆಯಾದರೆ ತಕ್ಷಣ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯುಕ್ತರು ಹೇಳಿದರು.
ಇದು ಕೇವಲ ವ್ಯಾಪಾರಿಗಳ ಸುರಕ್ಷತೆಗಲ್ಲ, ನಗರ ನಾಗರಿಕರ ಜೀವ ಹಾಗೂ ಆಸ್ತಿ ರಕ್ಷಣೆಗೆ ಸಂಬಂಧಿಸಿದ ಕ್ರಮವಾಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಕೂಡಾ ಪಟಾಕಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದು, ಪಟಾಕಿ ಸಂಗ್ರಹಣೆ ವೇಳೆ ಅಗ್ನಿಶಾಮಕ ಉಪಕರಣಗಳು ಕಡ್ಡಾಯವಾಗಿ ಇರಬೇಕು, ಸುರಕ್ಷಿತ ಅಂತರದಲ್ಲಿ ಸ್ಟಾಲ್‌ಗಳನ್ನು ಸ್ಥಾಪಿಸಬೇಕು ಹಾಗೂ ಯಾವುದೇ ರೀತಿ ಮುಚ್ಚಿದ ಗೋದಾಮುಗಳಲ್ಲಿ ಪಟಾಕಿ ಇಡಬಾರದು ಎಂದು ಹೇಳಿದ್ದಾರೆ.