Bengaluru: ರಾಜ್ಯ ಸರ್ಕಾರ ರಾಜಧಾನಿ ಬೆಂಗಳೂರಿನ (Bengaluru) ಜನರಿಗೆ ಘನತ್ಯಾಜ್ಯ ಸೇವಾ ಶುಲ್ಕ ಭಾಗ್ಯ ನೀಡಲು ಮುಂದಾಗಿದೆ. ಹಾಗಾಗಿ ರಾಜಧಾನಿಯ ಪ್ರತಿ ಮನೆಯಿಂದ ತಿಂಗಳಿಗೆ 100 ರೂಪಾಯಿಗಳ ಶುಲ್ಕ ವಿಧಿಸಲು ಯೋಜನೆ ರೂಪಿಸಿಕೊಂಡಿದೆ. ಇತ್ತಿಚೆಗಷ್ಟೇ ರಾಜ್ಯ ಸರ್ಕಾರ ಬಿಬಿಎಂಪಿ (BBMP) ಅಡಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯನ್ನು ಮಾಡಿತ್ತು. ಈಗ ಕಂಪನಿಯಿಂದ ನೇರವಾಗಿ ಘನತ್ಯಾಜ್ಯ ಶುಲ್ಕ ವಿಧಿಸಲು ಪ್ಲ್ಯಾನ್ ಮಾಡಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆಯೇ ಘನತ್ಯಾಜ್ಯ (Solid Waste) ಶುಲ್ಕ ವಿಧಿಸುವ ಚರ್ಚೆ ನಡೆದಿತ್ತು. ಆದರೆ ಸಾರ್ವಜನಿಕರ ವಿರೋಧ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು. ಈಗ ಮತ್ತೆ ಪ್ರತಿ ಮನೆಗೂ ಘನತ್ಯಾಜ್ಯ ಶುಲ್ಕ ವಿಧಿಸೋದಕ್ಕೆ ಸರ್ಕಾರ ಮುಂದಾಗಿದೆಯಂತೆ. ಬೇರೆ ರಾಜ್ಯಗಳ ವರದಿ ಆಧರಿಸಿ ಸರ್ಕಾರಕ್ಕೆ ಕಂಪನಿ ಪ್ರಸ್ತಾವನೆ ಮುಂದಿಟ್ಟಿದೆ. ಈಗಾಗಲೇ ದೇಶದ ಬೇರೆ ರಾಜ್ಯಗಳಲ್ಲಿ ಈ ತೆರಿಗೆ ಪದ್ಧತಿ ಜಾರಿಯಲ್ಲಿದ್ದು, ಅದೇ ರೀತಿ ಬೆಂಗಳೂರಲ್ಲಿ ಜಾರಿ ಮಾಡೋದಕ್ಕೆ ಬಿಬಿಎಂಪಿ ಮುಂದಾಗಿದೆ.
ಕೆಲ ದಿನಗಳ ಹಿಂದಷ್ಟೇ ವಿದ್ಯುತ್ ಬಿಲ್ ಮೂಲಕ ಸೇವಾ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಗೃಹ ಜ್ಯೋತಿ ಯೋಜನೆ (Gruha Jyoti Yojana) ಹಿನ್ನೆಲೆ ಬಹುತೇಕ ಮಂದಿ ಬಿಲ್ ಪಾವತಿ ಮಾಡಿಲ್ಲ. ಈ ಹಿನ್ನೆಲೆ ಅಸ್ತಿ ತೆರಿಗೆಯೊಂದಿಗೆ ಘನತ್ಯಾಜ್ಯ ಸೇವಾ ಶುಲ್ಕ ವಿಧಿಸುವ ಮೂಲಕ ಹಣ ಸಂಗ್ರಹಕ್ಕೆ ಪ್ಲಾನ್ ನಡೆದಿದೆಯಂತೆ.

ಸದ್ಯ ವಸತಿ ಕಟ್ಟಡಗಳಿಗೆ ಮಾಸಿಕ 100 ರೂಪಾಯಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ 200 ರೂಪಾಯಿ ದರ ನಿಗದಿಗೆ ಪ್ರಸ್ತಾವನೆ ಸಲ್ಲಿಸುವ ಯೋಜನೆಯಿದೆ ಎಂದು ಬಿಬಿಎಂಪಿ ಹೇಳಿದೆ.
ಇನ್ನು ಕಸ ಸಂಗ್ರಹಕ್ಕೆ ಶುಲ್ಕ ನಿಗದಿ ಮಾಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath), 2016ರ ರೂಲ್ ಪ್ರಕಾರ ನೋಟಿಫಿಕೇಷನ್ ಆಗಿದೆ. ಆದರೆ ಅದಕ್ಕಿಂತ ಕಡಿಮೆ ಹಣ ವಸೂಲಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರ ಅನುಮೋದನೆ ಕೊಟ್ಟ ಮೇಲೆ ಅದನ್ನ ನಿಗದಿ ಮಾಡುತ್ತೇವೆ. ನಮ್ಮ ರಾಜ್ಯದಲ್ಲೇ ಪಂಚಾಯಿತಿಗಳಲ್ಲಿ ಶುಲ್ಕ ವಸೂಲಾತಿ ನಡೆಯುತ್ತಿದೆ. ಈಗ ನಾವು ಇನ್ನೂ ಕಡಿಮೆ ಶುಲ್ಕವನ್ನ ನಿಗದಿಗೆ ಪ್ರಸ್ತಾವನೆ ಕೊಟ್ಟಿದ್ದೇವೆ. ಸರ್ಕಾರ ಅನುಮತಿ ಕೊಟ್ಟರೇ ಶುಲ್ಕ ವಸೂಲಿ ಮಾಡುತ್ತೇವೆ ಇಲ್ಲವಾದಲ್ಲಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.