ಗುಜರಾತ್(Gujarat) ರಾಜ್ಯ ಸರ್ಕಾರ(State Government) 6 ರಿಂದ 12ನೇ ತರಗತಿಯ(Class) ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು(Bhagavadgitha) ಅಳವಡಿಸಿಕೊಂಡಿದೆ. ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಸಂದೇಶಗಳ ಮೂಲಕ ನೈತಿಕ ಮೌಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಗುಜರಾತ್ ಸರ್ಕಾರ ಹೇಳಿದೆ.
ಇನ್ನು ರಾಜ್ಯದಲ್ಲಿಯೂ ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು ಅಳವಡಿಕೆಗೆ ರಾಜ್ಯ ಸರ್ಕಾರ ಮುಂದಾಗಲಿದೆಯೇ ಎಂಬ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ(Education Minister) ಬಿ.ಸಿ. ನಾಗೇಶ್(B.C Nagesh), ಸದ್ಯಕ್ಕೆ ನಮ್ಮ ಮುಂದೆ ಅಂತಹ ಆಯ್ಕೆಗಳಿಲ್ಲ. ಈ ವರ್ಷ ಈ ರೀತಿಯ ಬದಲಾವಣೆಗಳನ್ನು ನಾವು ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಇನ್ನು ಮಕ್ಕಳಿಗೆ ನೈತಿಕ ಶಿಕ್ಷಣವನ್ನು ನೀಡಬೇಕಿದೆ.
ಈ ನಿಟ್ಟಿನಲ್ಲಿ ನಾವು ಶಿಕ್ಷಣ ತಜ್ಞರು ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇವೆ. ಈಗ ಪುಸ್ತಕದಲ್ಲಿ ಜ್ಞಾನವಿದೆ, ಸಂಸ್ಕಾರವಿಲ್ಲ. ಹೀಗಾಗಿ ಮಕ್ಕಳಿಗೆ ಜ್ಞಾನದ ಜೊತೆ ಸಂಸ್ಕಾರವನ್ನು ನೀಡುವ ಕೆಲಸವಾಗಬೇಕಿದೆ ಎಂದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಹಿಜಾಬ್ ಕುರಿತು ಮಾತನಾಡಿದ ಅವರು, ಸದ್ಯ ಹೈಕೋರ್ಟ್ ತೀರ್ಪಿನ ಅನ್ವಯ ಹಿಜಾಬ್ ಧರಿಸಿ ಶಾಲಾ-ಕಾಲೇಜಿಗೆ ಅಥವಾ ಪರೀಕ್ಷೆಗೆ ಹಾಜರಾಗಲು ಅವಕಾಶವಿಲ್ಲ. ದ್ವಿತೀಯ ಪಿಯುಸಿ ಪರೀಕ್ಷೆಗೆ ಕೇವಲ ಒಂದು ತಿಂಗಳು ಉಳಿದಿದೆ.
ಹೀಗಾಗಿ ಹೈಕೋರ್ಟ್ ತೀರ್ಪಿನ ವಿರುದ್ದ ಸುಪ್ರೀಂಕೋರ್ಟ್‍ಗೆ ಹೋದರೆ ಅಲ್ಲಿ ತೀರ್ಪು ಬರುವವರೆಗಾದರು ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಕೆಲ ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ. ಆದರೆ ಹೈಕೋರ್ಟ್ ತೀರ್ಪು ನೀಡಿರುವಾಗ ಹೀಗೆ ಮಾಡಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ತೀರ್ಪು ನೀಡುವವರೆಗೂ ನಾವು ಹೈಕೋರ್ಟ್ ತೀರ್ಪನ್ನೇ ಪಾಲಿಸಬೇಕಾಗುತ್ತದೆ. ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಲು ಅವಕಾಶವಿದೆ. ನಿರ್ಧಾರ ವಿದ್ಯಾರ್ಥಿಗಳಿಗೆ ಬಿಟ್ಟಿದ್ದು ಎಂದು ಹೇಳಿದರು.
ಇನ್ನು ಗುಜರಾತ್ ಸರ್ಕಾರ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ, ಸರ್ಕಾರ ಸಧ್ಯಕ್ಕೆ ಅಂತಹ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು. ಕೊರೊನಾದಿಂದ ಮಕ್ಕಳು ಈಗಾಗಲೇ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ದಿಗೂ ಹೆಚ್ಚಿನ ಮಹತ್ವ ನೀಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.