ಬೆಂಗಳೂರು ಅ 11 : ತಜ್ಞರ ಅಭಿಪ್ರಾಯದಂತೆ ದಸರಾ ಮುಗಿದ ತಕ್ಷಣವೇ ಪ್ರಾಥಮಿಕ ಶಾಲೆಗಳನ್ನು ಆರಂಭಿಸುತ್ತೇವೆ. ಜೊತೆಗೆ ದಸರಾ ಮುಗಿದ ತಕ್ಷಣ ಬಿಸಿಯೂಟ ಆರಂಭವಾಗಲಿದೆ. ಆಯಾ ಜಿಲ್ಲೆಯ ಅಧಿಕಾರಿಗಳು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ
ಈ ಬಗ್ಗೆ ಮಾತನಾಡಿದ ಆವರು ಶಾಲೆ ಕಡ್ಡಾಯ ಮಾಡಿಲ್ಲ, ಮುಂದೆಯೂ ಕಡ್ಡಾಯ ಮಾಡಲ್ಲ. ಆನ್ಲೈನ್ ಆಫ್ ಲೈನ್ ಎರಡು ಮಾದರಿಯಲ್ಲಿ ತರಗತಿಗಳು ನಡೆಯಲಿದೆ. ಈಗ ಆರಂಭವಾಗಿರುವ ಶಾಲೆಗಳ ಹಾಜರಾತಿ ತೃಪ್ತಿಕರವಾಗಿದೆ. ಆನ್ಲೈನ್ ತರಗತಿಯಿಂದ ಕೆಳ ಗ್ರಾಮೀಣ ಮಕ್ಕಳಿಗೆ ತೊಂದರೆಯಾಗಿದೆ. ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್ ಮಕ್ಕಳ ಹಾಜರಾತಿ ಶೇ. 90ರಷ್ಟಿದೆ ಎಂದು ಅವರು ಮಾಹಿತಿ ನೀಡಿದರು.
ಎನ್ ಇ ಪಿ ಶಿಕ್ಷಣಕ್ಕೆ ಒತ್ತು ಡಾ.ಸಿ ಅಶ್ವತ್ಥನಾರಾಯಣ : ಸುಮಾರು ಐದೂವರೆ ವರ್ಷಗಳ ದೀರ್ಘಕಾಲದ ಸಮಾಲೋಚನೆ ಹಾಗೂ 3 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಕ್ರೋಡೀಕರಿಸಿ ಎನ್.ಇ.ಪಿ. ಕರಡು ರೂಪಿಸಲಾಗಿದೆ. ಇದು ನಮ್ಮ ತನವನ್ನು ಉಳಿಸಿಕೊಂಡೇ ಜಾಗತಿಕ ಪೈಪೋಟಿಯಲ್ಲಿ ಯಶಸ್ವಿಯಾಗಬೇಕೆಂಬ ಆಶಯ ಹೊಂದಿದೆ. ಕನ್ನಡ ಭಾಷೆಗಾಗಲೀ ಅಥವಾ ನಮ್ಮ ಭಾರತದ ಇನ್ನಿತರ ಭಾಷೆಗಾಗಲೀ ಇದರಿಂದ ಧಕ್ಕೆಯಾಗುವುದಿಲ್ಲ. ಪದವಿ ಹಂತದಲ್ಲಿ ಎರಡು ವರ್ಷಗಳ ಅವಧಿಗೆ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿರುವುದರ ಜೊತೆಗೆ ಉನ್ನತ ಶಿಕ್ಷಣದ ಕೋರ್ಸ್ ಗಳನ್ನು ಪ್ರಾದೇಶಿಕ ಭಾಷೆಯಲ್ಲೂ ಕಲಿಸುವ ವ್ಯವಸ್ಥೆ ಜಾರಿಗೊಳ್ಳಲಿದೆ. ಈ ಕ್ರಮಗಳಿಂದಾಗಿ, ನಮ್ಮ ಭಾಷೆಗಳು ಮತ್ತಷ್ಟು ಬಲಗೊಳ್ಳಲಿವೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.