ಬೆಂಗಳೂರು ಸೆ 11 : ಕೊರೊನಾ ಹಿನ್ನಲೆಯಲ್ಲಿ ಪಠ್ಯಗಳನ್ನು ಕಡಿತಗೊಳಿಸುವ ಯಾವುದೇ ಆಲೋಚನೆಗಳಿಲ್ಲ ಎಂದು ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಬಿ.ಎಸ್. ನಾಗೇಶ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಪಠ್ಯ ಕಡಿತಗೊಳಿಸಿದರೆ ಮುಂದಿನ ತರಗತಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಈ ಬಗ್ಗೆ ಇನ್ನೂ ಯಾವುದೇ ನಿರ್ಣಯ ಕೈಗೊಂಡಿಲ್ಲ. ಪಠ್ಯ ಪೂರ್ಣಗೊಳಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಒಂದೂವರೆ ವರ್ಷ ಶಾಲೆಯಿಂದ ದೂರ ಉಳಿದಿದ್ದಾರೆ. ಇದನ್ನು ಬ್ರಿಡ್ಜ್ ಕೋರ್ಸ್ನಲ್ಲಿ ಪೂರ್ಣಗೊಳಿಸಬೇಕಿದೆ. ಶಿಕ್ಷಕರ ಸಹಕಾರ ನೋಡಿ ಅಗತ್ಯಬಿದ್ದರೆ ತೀರ್ಮಾನಿಸುತ್ತೇವೆ ಎಂದರು.
ಪಕ್ಕದ ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸೋಂಕು ಕಡಿಮೆ ಆಗುತ್ತಿದೆ. ಕೊವಿಡ್ ಹೆಚ್ಚಾದರೆ ಶಾಲೆ ತಕ್ಷಣ ನಿಲ್ಲಿಸುವ ಅವಕಾಶ ಇದೆ. ಶಾಲೆಗಳನ್ನು ತಕ್ಷಣ ನಿಲ್ಲಿಸುವ ಅವಕಾಶ ಸರ್ಕಾರಕ್ಕೆ ಇದೆ. ಕೊರೊನಾ ಹೆಚ್ಚಾದ ಸಂದರ್ಭದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
1 ರಿಂದ 5ನೇ ತರಗತಿಗಳ ಆರಂಭಕ್ಕೆ ಸಿದ್ದತೆ
ಸಮಿತಿ ಅನುಮತಿ ನೀಡಿದರೆ 1 ರಿಂದ 5ನೇ ತರಗತಿಗಳ ಆರಂಭಕ್ಕೆ ಸಿದ್ದತೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.ಈಗಾಗಲೇ 9ರಿಂದ 12 ಹಾಗೂ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ನಡೆಯುತ್ತಿವೆ. ಒಂದರಿಂದ ಐದನೆ ತರಗತಿಗಳ ವರೆಗೂ ಶಾಲೆ ಆರಂಭಿಸುವ ಬಗ್ಗೆ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.