- ಬೆಂಗಳೂರಿನಲ್ಲಿ ಮಧ್ಯವರ್ತಿಗಳ ಮೂಲಕ ಮನೆ ಪಡೆಯೋ ಮುನ್ನ ಎಚ್ಚರ
- ಖಾಸಗಿ ಕಂಪನಿ ಹೆಸರಿನಲ್ಲಿ ವ್ಯಕ್ತಿಯೊಬ್ಬ ಅನೇಕ ಕುಟುಂಬಗಳಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದು ವಂಚನೆ
- ಹಣವು ಇಲ್ಲ, ಮನೆಯಲ್ಲಿ ಕೂಡ ಇರುವ ಹಾಗಿಲ್ಲ ಸಂತ್ರಸ್ತರ ನೋವು ಕೇಳುವವರಿಲ್ಲ
Bengaluru: ಬೆಂಗಳೂರು ನಗರದಲ್ಲಿ ಮನೆ ಬಾಡಿಗೆ ದರಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಸಾಮಾನ್ಯ ಕುಟುಂಬಗಳಿಗೆ ತಿಂಗಳ ಬಾಡಿಗೆ ಕಟ್ಟುವುದು ಕಷ್ಟವಾಗಿರುವುದರಿಂದ,
ಹಲವರು ಲೀಸ್ ಮನೆಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಲೀಸ್ ವ್ಯವಸ್ಥೆಯಲ್ಲಿ ಒಮ್ಮೆಲೆ ದೊಡ್ಡ ಮೊತ್ತವನ್ನು ಪಾವತಿಸಿ, ಕೆಲವರ್ಷಗಳ ಕಾಲ ಮನೆಯಲ್ಲಿ ಬಾಡಿಗೆ ಇಲ್ಲದೆ ವಾಸಿಸುವ ಅವಕಾಶ ಸಿಗುತ್ತದೆ.
ಆದರೆ ಈ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡು, ಕೆಲವು ಜನರು ಭಾರೀ ವಂಚನೆ ನಡೆಸಿದ್ದಾರೆ. ಇತ್ತೀಚೆಗೆ ಬಹಿರಂಗವಾದ ಒಂದು ಪ್ರಕರಣ ಇದಕ್ಕೆ ದೊಡ್ಡ ಉದಾಹರಣೆಯಾಗಿದೆ.
ಅಷ್ಟಕ್ಕೂ ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪನಿಯ ಮಾಲೀಕ ವಿವೇಕ್ ಕೇಶವನ್, ಅನೇಕ ಮನೆಗಳನ್ನು ಮಾಲೀಕರಿಂದ ಬಾಡಿಗೆಗೆ ಪಡೆದು, ಅವುಗಳನ್ನು ಮರು ಲೀಸ್‌ಗೆ ಕೊಡುತ್ತಿದ್ದ.
ಪ್ರಾರಂಭದಲ್ಲಿ ಮನೆ ಮಾಲೀಕರಿಗೆ ಕೆಲವು ತಿಂಗಳು ಬಾಡಿಗೆ ಪಾವತಿಸಿ ಅವರ ವಿಶ್ವಾಸ ಪಡೆದ. ಬಳಿಕ ಆ ಮನೆಗಳನ್ನು ಇತರ ಕುಟುಂಬಗಳಿಗೆ ಲೀಸ್‌ಗೆ ನೀಡಿ, ಲಕ್ಷಾಂತರ ರೂಪಾಯಿಗಳನ್ನು ವಸೂಲು ಮಾಡುತ್ತಿದ್ದ.

ಆದರೆ, ಕಳೆದ ಆರು ತಿಂಗಳಿಂದ ಮಾಲೀಕರಿಗೆ ಯಾವುದೇ ಬಾಡಿಗೆ ಪಾವತಿಯಾಗದೇ, ಹಠಾತ್ ಕಂಪನಿ ಕಚೇರಿ ಮುಚ್ಚಲ್ಪಟ್ಟಿತು. ವಿವೇಕ್ ಕೇಶವನ್ ಹಾಗೂ ಆತನ ಸಹಚರರು ನಾಪತ್ತೆಯಾದರು.
ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ ನಂತರ, ಈ ಘಟನೆ ಬಹಿರಂಗವಾಗಿದೆ.
ಇನ್ನು ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 60 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ನಡೆದಿರಬಹುದು. ಈಗಾಗಲೇ ಪರಪ್ಪನ ಅಗ್ರಹಾರ,
ಹೆಬ್ಬಗೋಡಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗಳಲ್ಲಿ ಅನೇಕ ಎಫ್‌ಐಆರ್‌ಗಳು ದಾಖಲಾಗಿವೆ. ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ ಸೇರಿದಂತೆ ಬೆಂಗಳೂರಿನ ಹಲವೆಡೆ
ಇಂತಹ ವಂಚನೆ ನಡೆದಿದೆ ಎಂಬ ಮಾಹಿತಿ ಬಂದಿದೆ.ಹಣ ಕೊಟ್ಟು ಲೀಸ್ ಪಡೆದ ಕುಟುಂಬಗಳು ಈಗ ಎರಡು ಬಗೆಯ ಸಮಸ್ಯೆ ಎದುರಿಸುತ್ತಿವೆ.
ಒಂದು ಕಡೆ ತಮ್ಮ ಜೀವಮಾನ ಉಳಿತಾಯವನ್ನು ಕಳೆದುಕೊಂಡಿದ್ದಾರೆ. ಇನ್ನೊಂದು ಕಡೆ ಮನೆಯ ಮಾಲೀಕರು, “ಬಾಡಿಗೆ ಪಾವತಿಯಾಗಿಲ್ಲ, ಮನೆ ಖಾಲಿ ಮಾಡಬೇಕು” ಎಂದು ಒತ್ತಡ ಹಾಕುತ್ತಿದ್ದಾರೆ.
ಒಬ್ಬ ಸಂತ್ರಸ್ತರು ಬೇಸರದಲ್ಲಿ “ನಾವು ಜೀವನಪೂರ್ತಿ ದುಡಿದು ಸಂಗ್ರಹಿಸಿದ ಹಣವನ್ನು ಈ ಲೀಸ್ ಒಪ್ಪಂದಕ್ಕೆ ಕೊಟ್ಟಿದ್ದೇವೆ. ಈಗ ನಮ್ಮ ಬಳಿ ಮನೆ ಇಲ್ಲ, ಹಣವೂ ಹಿಂತಿರುಗಿಲ್ಲ. ಮಕ್ಕಳನ್ನು ಎಲ್ಲಿ ಕೊಂಡೊಯ್ಯಬೇಕು?”
ಎಂದು ಕಣ್ಣೀರು ಹಾಕಿದ್ದಾರೆ.ಮತ್ತೊಬ್ಬರು, “ಕಂಪನಿಯ ಕಚೇರಿ, ವೆಬ್‌ಸೈಟ್ ಎಲ್ಲವೂ ನಿಜವಾದಂತೆ ಕಂಡಿತ್ತು. ನಮಗೆ ತುಂಬಾ ವಿಶ್ವಾಸ ಮೂಡಿತ್ತು.
ಆದರೆ ಈಗ ನಮ್ಮ ಕನಸಿನ ಮನೆ ಬದಲಿಗೆ ಭಾರೀ ಕಷ್ಟ ಬಂದಿದೆ” ಎಂದು ಹೇಳಿದ್ದಾರೆ. ಈಗಾಗಲೇ ಪೊಲೀಸರು ವಿವೇಕ್ ಕೇಶವನ್ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಿದ್ದು, ಹುಡುಕಾಟ ಆರಂಭಿಸಿದ್ದಾರೆ.
ಇದನ್ನು ಓದಿ : ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಸರ್ಕಾರದ ಉಚಿತ ಮನೆ ಗ್ಯಾರಂಟಿ: 2026ರೊಳಗೆ 1.80 ಲಕ್ಷಕ್ಕೂ ಹೆಚ್ಚು ಮನೆ ಹಂಚಿಕೆಯ ಗುರಿ
ಆರೋಪಿ ಹಲವಾರು ಪ್ರದೇಶಗಳಲ್ಲಿ ವಂಚನೆ ಮಾಡಿರುವುದರಿಂದ ತನಿಖೆ ವಿಸ್ತರಿಸಲಾಗಿದೆ. ಜನರಿಗೆ ಎಚ್ಚರಿಕೆ ನೀಡುತ್ತಾ, ಲೀಸ್ ಒಪ್ಪಂದ ಮಾಡುವ ಮುನ್ನ ಎಲ್ಲಾ ದಾಖಲೆಗಳನ್ನು ಪರಿಶೀಲಿಸುವುದು ಅತ್ಯಗತ್ಯ ಎಂದು ತಿಳಿಸಿದ್ದಾರೆ.