ಮಂಗಳೂರು : ಮಂಗಳೂರಿನ ಬೆಳ್ತಂಗಡಿ ತಾಲ್ಲೂಕಿನ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಾಗಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದಡಿ ಶಾಸಕ ಹರೀಶ್ ಪೂಂಜಾ ಮೇಲೆ ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ ಅವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ ಎಂಬುದು ವರದಿಯಾಗಿದೆ. ಫೆಬ್ರವರಿ 28ನೇ ತಾರೀಖಿನಂದು ಬೆಳ್ತಂಗಡಿಯಲ್ಲಿ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಾಸಕ ಹರೀಶ್ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದಲ್ಲದೇ ನೆರದಿದ್ದ ಜನರನ್ನು ಕೆಣಕುವಂತೆ ಭಾಷಣ ಮಾಡಿದ್ದಾರೆ.

ದೆಹಲಿಯಲ್ಲಿ ಕೆಂಪುಕೋಟೆಯಲ್ಲಿ ಭಗವಾಧ್ವಜವನ್ನು ರಾರಾಜಿಸುತ್ತೇವೆ ಎಂದು ಹೇಳಿ ಸುಮ್ಮನಿರದೇ, ಮಾತನ್ನು ಮುಂದುವರೆಸಿ ರಾಷ್ಟ್ರದ ತ್ರಿವರ್ಣ ಧ್ವಜದ ಕೆಳಗೆ ಭಗವಾ ಧ್ವಜವನ್ನು ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಈ ರೀತಿ ಉದ್ರೇಕವಾಗಿ ಭಾಷಣ ಮಾಡಿದ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಶಾಸಕ ಹರೀಶ್ ಪೂಂಜಾ ಭಾರತದ ಸಂವಿಧಾನದ ವಿರುದ್ಧ ನಡೆದಿದ್ದಾರೆ.

ರಾಷ್ಟ್ರಧ್ವಜವನ್ನು ಅಮಾನಿಸಿದ್ದಲ್ಲದೇ, ಸಂವಿಧಾನದ ಪ್ರಮಾಣವಚನ ಸ್ವೀಕರಿಸಿದ ಶಾಸಕರು ಈ ರೀತಿ ಸಂವಿಧಾನದ ವಿರುದ್ಧವಾದ ಹೇಳಿಕೆ ನೀಡುವುದು ಅಕ್ಷಮ್ಯ ತಪ್ಪು! ಇಂಥವರು ದೇಶದ್ರೋಹಿಗಳು ಎಂದು ಪರಿಗಣಿಸಿ ಶಿಕ್ಷೆ ನೀಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಅಧ್ಯಕ್ಷ ಅನಿಲ್ ಪೈ ಹೇಳಿದ್ದಾರೆ. ಈ ಕೂಡಲೇ ಇಂಥ ದೇಶದ್ರೋಹಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.