ಬೆಂಗಳೂರು ಸೆ 8 : ಕರೊನಾ ಕೊಂಚ ಕಡಿಮೆಯಾಗುತ್ತಿರುವ ಬೆನ್ನಕ್ಕೆ ರಾಜ್ಯಕ್ಕೆ ಇದೀಗ ನಿಫಾ ವೈರಸ್ ಕಾಟ ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿವೆ ಈ ಹಿನ್ನಲೆಯಲ್ಲಿ ರಾಜ್ಯದ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು ಮತ್ತು ಚಾಮರಾಜನಗರದಲ್ಲಿ ಬಿಗಿ ಕಣ್ಗಾವಲು ನಿಯೋಜಿಸಲಾಗುತ್ತಿದೆ.ಈ ಕುರಿತು ಮಾರ್ಗಸೂಚಿ ಬಿಡುಗಡೆಗೊಳಿಸಿರುವ ರಾಜ್ಯ ಆರೋಗ್ಯ ಇಲಾಖೆ, ಕೇರಳದಿಂದ ಅಗಮಿಸುವವರನ್ನು ತಪಾಸಣೆಗೊಳಪಡಿಸಿ ಜ್ವರ, ಮಾನಸಿಕ ಸ್ಥಿತಿಗತಿ, ದುರ್ಬಲತೆ, ತಲೆನೋವು, ಶ್ವಾಸಕೋಶದ ತೊಂದರೆ, ಕೆಮ್ಮು, ವಾಂತಿ, ಸ್ನಾಯುಸೆಳೆತದಂತಹ ಲಕ್ಷಣಗಳಿವೆಯೇ ಎಂದು ಪರಿಶೀಲಿಸಬೇಕು ಎಂದು ಸರ್ಕಾರ ಆದೇಶಿಸಿದೆ.
ಕೊಡಗು ಜಿಲ್ಲೆ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿದೆ. ಇನ್ನು ಈಗಾಗಲೇ ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾಗಿದ್ದು,12 ವರ್ಷದ ಬಾಲಕ ಕೊನೆಯುಸಿರೆಳೆದಿದ್ದಾನೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಮುಂಜಾಗ್ರತಾ ಕ್ರಮ ವಹಿಸಿಕೊಳ್ಳಲಾಗಿದೆ. ಕೊಡಗು ಗಡಿಭಾಗದಿಂದ ಜನರು ಮತ್ತು ಕೇರಳದಿಂದ ಆಮದು ಆಗುವಂತಹ ಹಣ್ಣುಗಳನ್ನು ಬಳಕೆ ಮಾಡಲು ಕೊಡಗಿನ ಜನರು ಭಯಪಡುತ್ತಿದ್ದಾರೆ.
ನೆರೆಯ ಕೇರಳದ ಪ್ರಸ್ತುತ ಪರಿಸ್ಥಿತಿ ಪರಿಗಣಿಸಿ, ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ, ಹೋಟೆಲ್, ಆಸ್ಪತ್ರೆ, ನರ್ಸಿಂಗ್ ಹೋಮ್, ಕಾರ್ಖಾನೆ ಮುಂತಾದ ಸಂಸ್ಥೆಗಳ ಆಡಳಿತ ವರ್ಗ,ಮಾಲೀಕರಿಗೆ ಕೇರಳದಿಂದ ಆಗಮಿಸುವ ತಮ್ಮ ವಿದ್ಯಾರ್ಥಿಗಳು,ಉದ್ಯೋಗಿಗಳಿಗೆ ಅಕ್ಟೋಬರ್ ಅಂತ್ಯದವರೆಗೆ ತಮ್ಮ ಪ್ರಯಾಣವನ್ನು ಮುಂದೂಡಲು ತಿಳಿಸುವಂತೆ ಸೂಚಿಸಲಾಗಿದೆ. ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.