- ಜಲಮಂಡಳಿ ಸಮರ್ಥನೆ, ಬಳಕೆದಾರರಿಂದ ಖಂಡನೆ
- ನೀರಿನ ದರ ಏರಿಕೆಗೆ ಸಾರ್ವಜನಿಕರು, ಕೈಗಾರಿಕೋದ್ಯಮಿಗಳು ಮತ್ತು ವಿವಿಧ ಸಂಘಟನೆಗಳಿಂದ ವ್ಯಾಪಕ ವಿರೋಧ
- ದಿನನಿತ್ಯ ಬಳಕೆಯ ಸರಕು, ಸೇವೆಗಳ ಸರಣಿ ಬೆಲೆ ಏರಿಕೆಯಿಂದ ಹೈರಾಣಾಗಿರುವ ನಾಗರಿಕರಿಗೆ ನೀರಿನ ದರ ಪರಿಷ್ಕರಣೆ ಬರೆ
Bengaluru: ನೀರಿನ ದರ ಏರಿಕೆಯು ಜನಸಾಮಾನ್ಯರು, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಅಘಾತವನ್ನು ಉಂಟು ಮಾಡಿದ್ದು, ಬೆಂಗಳೂರು (Bengaluru water price hike) ಜಲಮಂಡಳಿಯ ಈ ನಿರ್ಧಾರಕ್ಕೆ ಸಾರ್ವಜನಿಕರು ಮತ್ತು ಕೈಗಾರಿಕೋದ್ಯಮಿಗಳಿಂದ ವಿರೋಧ ವ್ಯಕ್ತವಾಗಿದೆ.

ಕೆಲವು ದಿನಗಳಿಂದ ದಿನನಿತ್ಯ ಬಳಕೆಯ ಸರಕು, ಸೇವೆಗಳ ಸರಣಿ ಬೆಲೆ ಏರಿಕೆಯಿಂದ ಹೈರಾಣಾಗಿರುವ ನಾಗರಿಕರಿಗೆ ನೀರಿನ ದರ ಪರಿಷ್ಕರಣೆ ಮಾಡುವ ಮೂಲಕ ಬೆಂಗಳೂರು ಜಲಮಂಡಳಿ (Bangalore Water Board) ಮತ್ತೊಂದು ಬರೆ ಎಳೆದಿದೆ. ಬೆಲೆ ಏರಿಕೆಯಂತಹ ನಿರ್ಧಾರಗಳನ್ನು ಕೈಗೊಳ್ಳುವಾಗ ರಾಜ್ಯ ಸರಕಾರ ಜನಸಾಮಾನ್ಯರ ಜಾಗದಲ್ಲಿ ನಿಂತು ಒಮ್ಮೆ ಯೋಚಿಸಿ, ತೀರ್ಮಾನ ಕೈಗೊಳ್ಳುವ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ ತಿಂಗಳ ಬಿಲ್‌ನಲ್ಲಿಯೇ ದರ ಏರಿಕೆ ಅನ್ವಯವಾಗಲಿದ್ದು, ಈ ಹಿಂದೆ ಪಾವತಿಸುತ್ತಿದ್ದ ಶುಲ್ಕವು ಏರಿಕೆಯಾದ ಬಳಿಕ ಎಷ್ಟು ಬರಬಹುದು ಎಂಬ ಗೊಂದಲ ಜನಸಾಮಾನ್ಯರಲ್ಲಿ ಉಂಟಾಗಿದ್ದು, ಈ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ಜಲಮಂಡಳಿ ಸಮಗ್ರ ಮಾಹಿತಿಯನ್ನೂ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಗೃಹ ಬಳಕೆದಾರರಿಗೆ 8 ಸಾವಿರ ಲೀ.ವರೆಗೆ ಪ್ರತಿ ಲೀ.ನೀರಿಗೆ 0.15 ಪೈಸೆ ಏರಿಕೆಯಾಗಿದೆ. ಈ ಸ್ಲಾಬ್ ಬಳಕೆದಾರರಿಗೆ ತಿಂಗಳಿಗೆ ನೀರಿನ ಶುಲ್ಕ 100 ರೂ. ಬರುತ್ತಿದ್ದರೆ, ದರ ಏರಿಕೆಯಿಂದ 32 ರೂ. ಹೆಚ್ಚಾಗುವ ಮೂಲಕ 132 ರೂ. ಬರಬಹುದು.
8001-25000 ಲೀ. ವರೆಗೆ 0.30 ಪೈಸೆ ಏರಿಕೆಯಾಗಿದ್ದು, ಈ ಸ್ಲಾಬ್ ಬಳಕೆದಾರರಿಗೆ 350 ರೂ. ಮಾಸಿಕ ಶುಲ್ಕ ಬರುತ್ತಿದ್ದರೆ, ದರ ಏರಿಕೆಯಿಂದ 509 ರೂ. ಮತ್ತು 5 ಮನೆಗಳಿರುವ ವಸತಿ ಸಮುಚ್ಚಯಗಳು 50,000 ಲೀ. ಬಳಕೆದಾರರಾಗಿದ್ದರೆ, 1,191 ರೂ. ಬಿಲ್ ಬರುತ್ತಿದ್ದರೆ, ಇನ್ನು 1,809 ರೂ. ಹಾಗೂ 10,000 ಲೀ. ಬಳಕೆ ಮಾಡುತ್ತಿದ್ದ ಗೃಹೇತರ ಬಳಕೆದಾರರಿಗೆ ಇದುವರೆಗೂ 675 ರೂ. ಬರುತ್ತಿದ್ದರೆ ದರ ಏರಿಕೆಯಿಂದ 950 ರೂ. ಬರುವ ಸಾಧ್ಯತೆ ಇದೆ ಎನ್ನುತ್ತವೆ ಮಂಡಳಿಯ ಮೂಲಗಳು.
ಇದನ್ನು ಓದಿ : ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿಗಳ ಆಕ್ರೋಶಕ್ಕೆ ಕಾರಣವಾದ ಕಸ ತೆರಿಗೆ
ನೀರಿನ ದರದಿಂದ ಜನಸಾಮಾನ್ಯರ ಜೀವನ ನಿರ್ವಹಣೆಗೆ ಹೊರೆಯಾಗಿದೆ. ಜನಪ್ರತಿನಿಧಿಗಳು ತಮ್ಮ ವೇತನ, ಭತ್ಯೆಗಳನ್ನುಹೆಚ್ಚಳ (Bengaluru water price hike) ಮಾಡಿಕೊಂಡಾಗ ಸರಕಾರಕ್ಕೆ ನಷ್ಟವಾಗುವುದಿಲ್ಲ. ಆದರೆ, ಸಾರ್ವಜನಿಕರು ನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಏರಿಕೆ ಮಾಡಲಿಲ್ಲ ಎಂದರೆ ಸರಕಾರಕ್ಕೆ ನಷ್ಟವಾಗುತ್ತದೆ.
ಸರಕಾರ ಇಂತಹ ಜನವಿರೋಧಿ ಧೋರಣೆಗಳನ್ನು ಮೊದಲು ಬಿಡಬೇಕು ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನೀರಿನ ದರ ಪರಿಷ್ಕರಣೆಯಿಂದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಚಟುವಟಿಕೆಗೆ ಹೊಡೆತ ಬಿದ್ದಿದೆ. ದರ ಹೆಚ್ಚಳಕ್ಕೂ ಮುಂಚೆ ಜಲಮಂಡಳಿಯ ಸೇವೆಯಲ್ಲಿ ಸುಧಾರಣೆ ಆಗಬೇಕು.
ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸರಿಯಾಗಿ ಸಮರ್ಪಕ ನೀರು ಪೂರೈಸುವುದಿಲ್ಲ. ಅಲ್ಲದೆ, ಅನ್ಯ ಬಳಕೆಗೆ ಸಂಸ್ಕರಿಸಿದ ನೀರು ನೀಡುತ್ತೇವೆ ಎನ್ನುವ ಜಲಮಂಡಳಿ ಮಾತು ಹೇಳಿಕೆಗಷ್ಟೇ ಸೀಮಿತವಾಗಿದೆ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಶಿವಕುಮಾರ್ ದೂರಿದ್ದಾರೆ.