Bengaluru: ತೆರಿಗೆ ಸೋರಿಕೆ, ತೆರಿಗೆ ವಂಚನೆ, ತೆರಿಗೆ ಕಳ್ಳತನ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ #Siddaramaiah ಆದೇಶಿಸಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ಪ್ರಗತಿ ಪರಿಶೀಲನೆಯನ್ನು ವಿಧಾನಸೌಧದ @Vishanasoudha ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಿಗೆ ವಂಚಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಇನ್ನಷ್ಟು ತೀವ್ರವಾಗಿ ಜಾರಿಗೊಳಿಸುವ ಮೂಲಕ ತೆರಿಗೆ ವಂಚನೆ ತಡೆಗಟ್ಟುವ ಕಡೆಗೆ ಹೆಚ್ಚು ಆಸಕ್ತಿ ಕೊಡಬೇಕು ಹಾಗೂ ತೆರಿಗೆ ವಂಚನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ವಾಣಿಜ್ಯ ತೆರಿಗೆ ಸಂಗ್ರಹದ ಬೆಳವಣಿಗೆಯು ದರ ಶೇ 19.2ರಷ್ಟಿದ್ದು ಈ ಬೆಳವಣಿಗೆಯ ದರ ಇಡೀ ದೇಶದಲ್ಲಿಯೇ ಅತಿ ಹೆಚ್ಚಾಗಿದೆ. ಈ ಮೂಲಕ, ಸರಕು ಮತ್ತು ಸೇವಾ ತೆರಿಗೆ ಮತ್ತು ಮಾರಾಟ ತೆರಿಗೆ ಸಂಗ್ರಹದ ಸಾಧನೆಯಲ್ಲಿ ಕರ್ನಾಟಕವು (Karnataka) ದೇಶಕ್ಕೆ ನಂಬರ್ ಒನ್ ಎನಿಸಿಕೊಂಡಿದೆ ಎಂದು ರಾಜ್ಯದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಒಟ್ಟಾರೆ ದೇಶದಲ್ಲಿ ತೆರಿಗೆ ಸಂಗ್ರಹವು ಶೇ 9.4ರಷ್ಟು ರಾಜ್ಯದ ಪಾಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ರಾಜ್ಯದ ಪಾಲು ಹೆಚ್ಚಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿ ಅವರಿಗೆ ವಿವರಿಸಿದರು. ದೇಶದ ಸರಾಸರಿ ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ 15ರಷ್ಟು ಮಾತ್ರ ಇದ್ದು, ಅದಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹ ವಿಚಾರದಲ್ಲಿ ಗಮನಾರ್ಹ ಸಾಧನೆ ಆಗಿದೆ. ಹಾಗೆಂದು, ಇಷ್ಟಕ್ಕೆ ಸಮಾಧಾನಪಟ್ಟುಕೊಳ್ಳದೆ ತೆರಿಗೆ ವಂಚನೆ ಪ್ರಕರಣಗಳನ್ನು ಹೆಚ್ಚೆಚ್ಚು ಪತ್ತೆ ಹಚ್ಚಿ ತೆರಿಗೆ ಸಂಗ್ರಹ ಗುರಿಯನ್ನು ದಾಟಿ ಸಾಧನೆ ಮಾಡುವ ಅವಕಾಶಗಳಿವೆ. ಅದನ್ನು ಸಾಧಿಸಿ ತೋರಿಸಬೇಕು ಎಂದು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಕಿವಿಮಾತನ್ನು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಶೇ 24ರ ಬೆಳವಣಿಗೆ ಗುರಿಯನ್ನು ಇಲಾಖೆಗೆ ನೀಡಲಾಗಿದ್ದು, ಈ ಗುರಿ ಮೀರಬೇಕು. ಕಾರ್ಯಚಟುವಟಿಕೆಯಲ್ಲಿ ಹಿಂದೆ ಉಳಿದವರು ಎಲ್ಲಾ ಪ್ರಯತ್ನಗಳನ್ನೂ ಮಾಡಬೇಕಾಗಿದ್ದು, ಜಾಗೃತ ದಳದವರೂ ಸಹಕರಿಸಬೇಕು. ಎರಡು ತಿಂಗಳ ನಂತರ ಮತ್ತೆ ಪ್ರಗತಿ ಪರಿಶೀಲಿಸಲಾಗುವುದು.
ಈ ವೇಳೆಗೆ ಇನ್ನಷ್ಟು ಪ್ರಗತಿಯ ವರದಿ ನೀಡಿ ಮುಂದಿನ ಸಭೆ ವೇಳೆಗೆ ಒಟ್ಟಾರೆ ಪರಿಸ್ಥಿತಿ ಈಗಿರುವುದಕ್ಕಿಂತ ಹೆಚ್ವು ಆಶಾದಾಯಕ ಆಗಿರುವಂತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು. ಅಬಕಾರಿ ಇಲಾಖೆ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಅವರು ಅಕ್ರಮ ಮಧ್ಯಕ್ಕೆ ಕಡಿವಾಣ ಹಾಕಲು, ಅಕ್ರಮ ಮದ್ಯ ಸಾಗಾಟ ತಡೆಯಲು, ತೆರಿಗೆ ಬಾಕಿ ವಸೂಲಿ ಹಾಗೂ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗಡಿ ಪ್ರದೇಶಗಳು ಅದರಲ್ಲೂ ಗೋವಾದಿಂದ (Goa) ಅಕ್ರಮ ಮಧ್ಯ ಸಾಗಾಟದ ಮೇಲೆ ಜಾರಿ ಸಂಸ್ಥೆಗಳು ತೀವ್ರ ನಿಗಾ ಇಡಬೇಕು ಎಂದರು. ಅಕ್ರಮ ಮದ್ಯ ಉತ್ಪಾದನೆ ಮತ್ತು ಮಾರಾಟವು ಬಡವರ ಆದಾಯ ಮತ್ತು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿದ್ದು, ಕಂದಾಯ ವಸೂಲಾತಿ ಹೆಚ್ಚಳಕ್ಕೆ ಆದ್ಯತೆ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಭವ್ಯಶ್ರೀ ಆರ್.ಜೆ