ಶೃಂಗೇರಿ ನ 10 : ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ನೆಮ್ಮಾರು ಮೂಲದ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಬಂಧನವಾಗಿದೆ.
ನಿನ್ನೆ ಸಂಜೆ 5.30ರ ಸಮಯದಲ್ಲಿ ಕೇರಳ ಪೊಲೀಸರು ಸುಲ್ತಾನಬತ್ತೇರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ನಕ್ಸಲ್ ಹೋರಾಟದ ಮುಂಚೂಣಿಯಲ್ಲಿದ್ದು 2003 ರಿಂದ ಭೂಗತನಾಗಿದ್ದ ಬಿ.ಜಿ. ಕೃಷ್ಣಮೂರ್ತಿ 2018ರಲ್ಲಿ ಅವರ ತಂದೆ ಗೋಪಾಲ ರಾವ್ (81) ನಿಧನರಾದಾಗಲೂ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ.
ಬಿ.ಜಿ.ಕೃಷ್ಣಮೂರ್ತಿ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಮುಗಿಸಿದ ನಂತರ ಎಲ್‌ಎಲ್‌ಬಿ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಪಡೆದಿದ್ದರು. ವಿದ್ಯಾರ್ಥಿ ಜೀವನದಲ್ಲಿಯೇ ಮಾವೋ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದರು. 2000ರ ಆಸುಪಾಸಿನಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ ಸಂದರ್ಭ ಚುರುಕುಗೊಂಡ ನಕ್ಸಲ್ ಚಟುವಟಿಕೆಗೆ ಸೇರ್ಪಡೆಗೊಂಡ ಬಿ.ಜಿ.ಕೃಷ್ಣಮೂರ್ತಿ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.
ಸಧ್ಯ 48 ವರ್ಷದ ಬಿ.ಜಿ ಕೃಷ್ಣಮೂರ್ತಿ ಮೇಲೆ ರಾಜ್ಯದ ವಿವಿಧ ಪೋಲಿಸ್ ಠಾಣೆಯಲ್ಲಿ ಸುಮಾರು 53 ಕೇಸ್ ಗಳಿದ್ದು, 36 ವರ್ಷದ ಸಾವಿತ್ರಿ ಮೇಲೆ 22 ಕೇಸ್ ಗಳಿವೆ.
ಜಿಲ್ಲೆಯ ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಮತ್ತೆ ನಕ್ಸಲರು ಸಕ್ರಿಯರಾಗುವ ಮೂಲಕ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ನಿದ್ದೆಗೆಡಿಸಿದ್ದರು. ಇದನ್ನು ಬಹಳಷ್ಟು ಸಮಯದಿಂದ ಪೊಲೀಸರು ಬೆನ್ನಟ್ಟಿದ್ದರು. ಜಿಲ್ಲೆಯಲ್ಲಿ ನಕ್ಸಲ್ ನಾಯಕತ್ವದ ಕೊರತೆ ಇಂದ ಚಟುವಟಿಕೆಯೇ ಇಲ್ಲ ಎಂಬುದು ಈಗ ಇಬ್ಬರ ಬಂಧನದಿಂದ ಹುಸಿಯಾಗಿದೆ.
ಈ ಹಿಂದೆ ನಕ್ಸಲ್ ನಾಯಕಿಯಾಗಿದ್ದ ಕನ್ಯಾಕುಮಾರಿ, ನೂರ್ ಶ್ರೀಧರ್, ನಿಲ್ಗುಳಿ ಪದ್ಮನಾಭ ಸೇರಿ 15 ಮಂದಿ ನಕ್ಸಲರು ಶರಣಾಗತಿ ಮೂಲಕ ಚಳವಳಿಯಿಂದ ಮುಖ್ಯವಾಹಿನಿಗೆ ಮರಳಿದ ಪರಿಣಾಮ ಹಾಗೂ ನಕ್ಸಲ್ ಪೀಡಿತ ಪ್ರದೇಶದಲ್ಲಿ ಆಗಿರುವ ಅಭಿವೃದ್ಧಿಯಿಂದ ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ದುರ್ಬಲಗೊಂಡಿದೆ ಎಂದೇ ಭಾವಿಸಲಾಗಿತ್ತು. ಆದರೆ ಚಳವಳಿ ಆರಂಭದಲ್ಲೇ ನಾಯಕತ್ವ ವಹಿಸಿದ್ದ ಬಿ.ಜಿ.ಕೃಷ್ಣಮೂರ್ತಿ ಮತ್ತೆ ಸಕ್ರಿಯನಾಗಿದ್ದಾನೆ ಎನ್ನುವ ಅಂಶ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿತ್ತು, ಇತ್ತೀಚೆಗೆ ಹಲವೆಡೆ ಸುಳಿವಿನ ಮೇರೆಗೆ ಕೂಂಬಿಂಗ್ ಕಾರ್ಯಾಚರಣೆ ಸಹ ನಡೆದಿತ್ತು. ಆದರೆ ಇದೀಗ ಬಂಧನದ ಮೂಲಕ ನಕ್ಸಲ್ ಪಡೆಯ ಬಹುದೊಡ್ಡ ಮೂಲ ಕೊಂಡಿಯೊಂದು ಜೈಲು ಪಾಲಾಗಿದೆ.