English English Kannada Kannada

ಕೃಷಿ ಮಸೂದೆ ಹೋರಾಟ ರಾಜಕೀಯ ಪ್ರೇರಿತ – ಸಿ ಟಿ ರವಿ

ಬಿಜೆಪಿ ರೈತರ ವಿರೋಧಿ ಆಗಿದ್ದರೆ ಸ್ವಾಮಿನಾಥನ್ ವರದಿಯ ಬಹುತೇಕ ಅಂಶಗಳನ್ನು ಅನುಷ್ಠಾನಕ್ಕೆ ತರುತ್ತಿತ್ತೇ ಎಂದು ಪ್ರಶ್ನಿಸಿದ ಅವರು, ರೈತರ 28 ಉತ್ಪನ್ನಗಳ ಬೆಂಬಲ ಬೆಲೆಯನ್ನು ಮೋದಿ ಅವರ ನೇತೃತ್ವದ ಸರಕಾರ ಹೆಚ್ಚಿಸಿದೆ
Share on facebook
Share on google
Share on twitter
Share on linkedin
Share on print

ಬೆಂಗಳೂರು ಸೆ 28 : ಪ್ರಸ್ತುತ ಕೃಷಿ ಮಸೂದೆ ನೆಪದಲ್ಲಿ ನಡೆಯುತ್ತಿರುವ ಹೋರಾಟ  ಬಿಜೆಪಿ ವಿರೋಧಿಗಳ ಷಡ್ಯಂತ್ರದ ಭಾಗ ಹಾಗೂ ರಾಜಕೀಯ ಪ್ರೇರಿತ, ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನ ದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತ ಸಂಘಟನೆ ಹೆಸರಿನಲ್ಲಿ 3 ಪ್ರಮುಖ ಕೃಷಿ ಮಸೂದೆಗಳನ್ನು ವಿರೋಧಿಸಿ 19ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು, 100ಕ್ಕೂ ಹೆಚ್ಚು ಸಂಘಟನೆಗಳು ದೇಶದ ಉದ್ದಗಲಕ್ಕೆ ಕರೆಕೊಟ್ಟ ಬಂದ್‍ಗೆ ನಿರೀಕ್ಷಿತ ಪ್ರಮಾಣದಲ್ಲಿ ರೈತರ ಬೆಂಬಲ ಸಿಗದೆ ವಿಫಲಗೊಳಿಸಿ ಪ್ರಧಾನಿ ಮೋದಿ ಅವರ ಕೃಷಿ ಸುಧಾರಣಾ ಕ್ರಮಕ್ಕೆ ರೈತರು ಬೆಂಬಲವಾಗಿ ನಿಂತಿದ್ದಾರೆ. ಮೋದಿಯವರ ಪ್ರಾಮಾಣಿಕತೆ ಮತ್ತು ಕೃಷಿ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕೆಂಬ ಅವರ ಹಂಬಲವನ್ನು ರೈತರು ಅರ್ಥ ಮಾಡಿಕೊಂಡಿದ್ದಾರೆ. ರೈತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಬಂದ್ ವೇಳೆ ಒಂದು ಹಕ್ಕಿಯೂ ಹಾರಾಡದಂತಹ ವಾತಾವರಣ ಇರಬಹುದೇ ಎಂಬ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಕೆಲವು ಸಂಘಟನೆಗಳು ಚಳವಳಿ ನಡೆಸಿವೆ. ಜನಸಾಮಾನ್ಯರು, ರೈತರು ಈ ಬಂದ್ ಬೆಂಬಲಿಸಿಲ್ಲ. ಅರಾಜಕತೆ ಸೃಷ್ಟಿಯಿಂದ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಬಂದ್ ಸಂಘಟಕರು ಮನವರಿಕೆ ಮಾಡಿಕೊಳ್ಳಬಹುದೆಂದು ಆಶಿಸಿದರು. ಕೃಷಿ ಮಸೂದೆಗಳು ರೈತಪರವಾಗಿವೆ. ರೈತ ವಿರುದ್ಧವಾದ ಅಂಶಗಳೇನಿವೆ ಎಂದು ಕೃಷಿ ಸಚಿವರು ಸೇರಿ ಎಲ್ಲರೂ ಕಳೆದೊಂದು ವರ್ಷದಿಂದ ಕೇಳುತ್ತಲೇ ಬಂದಿದ್ದಾರೆ. ತಿದ್ದುಪಡಿಗೂ ಸಿದ್ಧ ಎಂದಿದ್ದೇವೆ. ರೈತರಿಗೆ ಆರ್ಥಿಕ ಬಲ ನೀಡುವ ಮಸೂದೆಗಳು ಇವಾಗಿದ್ದು, ಈ ಸುಧಾರಣೆಗೆ ಅಡ್ಡಗಾಲು ಹಾಕಲು ಷಡ್ಯಂತ್ರವನ್ನು ಕೆಲವರು ಪೂರ್ವಾಗ್ರಹ ಪೀಡಿತರಾಗಿ, ಇನ್ನೂ ಕೆಲವರು ಅರಿವಿಲ್ಲದೆ ಹಾಗು ಮತ್ತೆ ಹಲವರು ಬಿಜೆಪಿಯನ್ನು ವಿರೋಧಿಸುವ ಉದ್ದೇಶದಿಂದ ವಿರೋಧಿಸುತ್ತಿದ್ದಾರೆಯೇ ಹೊರತು ರೈತರು ಇದನ್ನು ವಿರೋಧಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಯನ್ನು ರೈತವಿರೋಧಿ ಎಂದು ಬಿಂಬಿಸುವ ಷಡ್ಯಂತ್ರ ಇದರ ಹಿಂದಿದೆ. ಬಿಜೆಪಿ ದಲಿತ ವಿರೋಧಿ ಎಂದು ಬಿಂಬಿಸಲು ಹೊರಟು ಸೋತರು. ಅಸಹಿಷ್ಣುತೆ ಹೆಸರಿನಲ್ಲಿ ಅರಾಜಕತೆ ಸೃಷ್ಟಿಗೂ ಮುಂದಾದರು. ಪ್ರಶಸ್ತಿ ವಾಪಸ್‍ನ ನಾಟಕ ನಡೆಯಿತು. ಸಿಎಎ ಹೆಸರಿನಲ್ಲಿ ಅರಾಜಕತೆ ಸೃಷ್ಟಿಗೆ ಯತ್ನ ನಡೆಯಿತು. ಕೃಷಿ ಎಂದರೆ ಏನೆಂದೇ ತಿಳಿಯದವರೂ ಈ ಮಸೂದೆಗಳ ವಿರುದ್ಧ ಚಳವಳಿಗೆ ಇಳಿದಿದ್ದನ್ನೂ ಕಂಡಿದ್ದೇವೆ ಎಂದು ವಿವರಿಸಿದರು.

ಬಿಜೆಪಿ ರೈತರ ವಿರೋಧಿ ಆಗಿದ್ದರೆ ಸ್ವಾಮಿನಾಥನ್ ವರದಿಯ ಬಹುತೇಕ ಅಂಶಗಳನ್ನು ಅನುಷ್ಠಾನಕ್ಕೆ ತರುತ್ತಿತ್ತೇ ಎಂದು ಪ್ರಶ್ನಿಸಿದ ಅವರು, ರೈತರ 28 ಉತ್ಪನ್ನಗಳ ಬೆಂಬಲ ಬೆಲೆಯನ್ನು ಮೋದಿ ಅವರ ನೇತೃತ್ವದ ಸರಕಾರ ಹೆಚ್ಚಿಸಿದೆ. ಆದರೆ, ಹಿಂದೆ ಬೆಂಬಲ ಬೆಲೆಗೆ (ಎಂಎಸ್‍ಪಿ) ಸಂಬಂಧಿಸಿ ಕಾಂಗ್ರೆಸ್ ಸರಕಾರವು ಬಜೆಟ್‍ನಲ್ಲಿ 40ರಿಂದ 45 ಸಾವಿರ ಕೋಟಿ ನೀಡುತ್ತಿತ್ತು. ಈಗ ಈ ವರ್ಷದಲ್ಲಿ 1.21 ಲಕ್ಷ ಕೋಟಿ ರೂಪಾಯಿಯಡಿ ರೈತರ ಉತ್ಪನ್ನ ಖರೀದಿ ನಡೆದಿದೆ. ರಸಗೊಬ್ಬರ ಸಬ್ಸಿಡಿಗೆ ಹಿಂದೆ ಕಾಂಗ್ರೆಸ್ ಸರಕಾರ 30ರಿಂದ 32 ಸಾವಿರ ಕೋಟಿ ನೀಡುತ್ತಿತ್ತು. ಈಗ 79 ಸಾವಿರ ಕೋಟಿ ನೀಡುತ್ತಿದ್ದೇವೆ ಎಂದು ವಿವರಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ಕಿಸಾನ್ ಸಮ್ಮಾನ್ ಯೋಜನೆ ಇರಲಿಲ್ಲ. ಈಗ 9.75 ಕೋಟಿ ಕೃಷಿಕರಿಗೆ ವರ್ಷಕ್ಕೆ 58 ಸಾವಿರ ಕೋಟಿ ಹಣವನ್ನು ತಲಾ 6 ಸಾವಿರ ರೂಪಾಯಿಯಂತೆ ನೀಡಲಾಗುತ್ತಿದೆ. ರಸಗೊಬ್ಬರ ಸಬ್ಸಿಡಿ ಹೆಚ್ಚಳ, ಕಿಸಾನ್ ಸಮ್ಮಾನ್ ಯೋಜನೆಯಡಿ ನೇರ ಹಣ ಬಿಡುಗಡೆ, ಸಾಯಿಲ್ ಹೆಲ್ತ್ ಕಾರ್ಡ್ ಯೋಜನೆ, ಫಸಲ್ ಬಿಮಾ ಯೋಜನೆಯಂಥ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಜಾಣಮರೆವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ನುಡಿದರು. ಸುಧಾರಣೆ ತರುವುದೇ ಅಪರಾಧ ಎಂಬಂತೆ ಬಿಂಬಿಸುವ ಪ್ರಯತ್ನ ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳಿಂದ ನಡೆದಿದೆ ಎಂದರು.

5 ರಾಜ್ಯಗಳ ಚುನಾವಣೆಯಲ್ಲೂ ಕಾಂಗ್ರೆಸ್ ದೂಳೀಪಟವಾದ ನಂತರ ಕಾಂಗ್ರೆಸ್ ಹೋರಾಟಕ್ಕೆ ಹೊಸದೇನನ್ನಾದರೂ ಹುಡುಕಬಹುದು ಎಂದರು. ಉತ್ಪನ್ನಗಳನ್ನು ಎಲ್ಲಿಯಾದರೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂಬುದು ರೈತ ವಿರೋಧಿ ಅಂಶವೇ? ಬೆಲೆ ಖಾತರಿಗೆ ಒಪ್ಪಂದ ಮಾಡಿಕೊಳ್ಳುವುದು ರೈತ ವಿರೋಧಿಯೇ? ಸುಧಾರಣೆಯ ಲಾಭ ರೈತರಿಗೆ ಸಿಗಬಾರದೇ? ಕೃಷಿ ಕ್ಷೇತ್ರಕ್ಕೆ ಬಂಡವಾಳ ಹರಿದು ಬರಬಾರದೇ ಎಂದು ಪ್ರಶ್ನಿಸಿದರು.

ಕೃಷಿಕರು ಮೌಲ್ಯವರ್ಧನೆ ಮಾಡಿ, ಉದ್ಯೋಗ ಸೃಷ್ಟಿಸಿ ತನ್ನ ಆದಾಯವನ್ನು ಎರಡು ಪಟ್ಟು ಮಾಡುವುದು ತಪ್ಪಾ ಎಂದು ಕೇಳಿದರು. ಫಾರ್ಮರ್ಸ್ ಪ್ರೊಡ್ಯೂಸರ್ ಆರ್ಗನೈಸೇಶನ್ ಮೂಲಕ ಕೃಷಿಯನ್ನು ಉದ್ದಿಮೆಯನ್ನಾಗಿ ಪರಿವರ್ತಿಸಿ ಮೌಲ್ಯವರ್ಧನೆ ಮಾಡುವ ಅವಕಾಶವನ್ನು ರೈತರಿಗೇ ನೀಡಲಾಗಿದೆ. ರೈತರನ್ನು ಮುಗಿಸಲು ರೈತರ ಹೆಸರಿನಲ್ಲೇ ಹೋರಾಟ ಮಾಡಲು ಇವರೆಲ್ಲರೂ ಮುಂದಾಗಿದ್ದಾರೆ ಎಂದರು. 60 ವರ್ಷಕ್ಕಿಂತ ಹೆಚ್ಚು ವಯಸ್ಸಾದ ರೈತರನ್ನು ಅಟಲ್ ಪಿಂಚಣಿ ಯೋಜನೆಯಡಿ ತಂದು ಅವರಿಗೂ ಪಿಂಚಣಿ ಸೌಲಭ್ಯ ನೀಡುವ ಚಿಂತನೆಯನ್ನು ನಮ್ಮ ಸರಕಾರ ಮಾಡುತ್ತಿದೆ. ಪಿಎಫ್ ಹೊರತಾದ ಅಸಂಘಟಿತ ಕೃಷಿ ಕಾರ್ಮಿಕರಿಗೂ ಪಿಂಚಣಿ, ವಿಮಾ ಸೌಕರ್ಯ ನೀಡಲು ಮೋದಿಯವರ ನೇತೃತ್ವದ ನಮ್ಮ ಸರಕಾರ ಯೋಜಿಸಿದೆ. ಹಾಗಿದ್ದರೆ ನಾವು ಕೃಷಿಕರ ವಿರೋಧಿ ಆಗಲೇ ಸಾಧ್ಯವೇ ಎಂದು ಕೇಳಿದರು.

ಈಗ ನಾವು ಅದಾನಿ ಪರ, ಅಂಬಾನಿ ಪರ ಎನ್ನುತ್ತಿದ್ದಾರೆ. ಅದಾನಿ, ಅಂಬಾನಿ ನಿನ್ನೆ ಮೊನ್ನೆ ಹುಟ್ಟಿದವರೇ? ಮೋದಿಯವರು ಬಂದ ಮೇಲೆ ಅದಾನಿ, ಅಂಬಾನಿ ಶ್ರೀಮಂತರಾದರೇ ಎಂದು ಕೇಳಿದರು. ನಮ್ಮ ಯೋಜನೆಗಳು ಅದಾನಿ, ಅಂಬಾನಿ ಪರ ಇಲ್ಲ. ರೈತರು, ಬಡವರು, ಕೃಷಿ ಕೂಲಿ ಕಾರ್ಮಿಕರ ಪರವಾಗಿವೆ ಎಂದು ವಿವರಿಸಿದರು.

ಯುಪಿಎ 10 ವರ್ಷ ಕಾಲದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಇತ್ತಾ, ಫಸಲ್ ಬಿಮಾ ಯೋಜನೆ ಇತ್ತಾ, ರಸಗೊಬ್ಬರಕ್ಕೆ 1,700 ರೂಪಾಯಿ ಸಬ್ಸಿಡಿ ನೀವು ಕೊಟ್ಟಿದ್ದೀರಾ ಎಂದು ಸಿದ್ದರಾಮಯ್ಯರನ್ನು ಕೇಳಿದರಲ್ಲದೆ, ಸಂಸತ್ತಿನಲ್ಲಿ ಚರ್ಚೆ ಮಾಡದೆ ಕಾಂಗ್ರೆಸ್ ಓಡಿ ಹೋಯಿತು. ರೈತರಿಗೆ ಬ್ರಿಟಿಷ್ ಕಾಯ್ದೆಗಳಿಂದ ಬಿಡುಗಡೆ ಭಾಗ್ಯವನ್ನು ಬಿಜೆಪಿ ನೀಡುತ್ತಿದೆ ಎಂದರು. ರೈತ ಮುಖಂಡ ನಂಜುಂಡಸ್ವಾಮಿಯವರು ರೈತರು ಉತ್ಪನ್ನಗಳನ್ನು ಎಲ್ಲ ಕಡೆ ಮಾರಾಟ ಮಾಡಲು ಅವಕಾಶ ಕೊಡಿ ಎಂದು ಕೇಳಿದ್ದರು. ಅವರ ಹಳೆಯ ಭಾಷಣ ಮರೆತಂತೆ ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರ ರೈತ ನಾಯಕರು ಮಾತನಾಡುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಕೆಲವರಿಗೆ ಬಿಜೆಪಿ ವಿರೋಧಿಸಿದರೆ ಮಾತ್ರ ತಿಂದ ಅನ್ನ ಅರಗುತ್ತದೆ ಎಂದರು.

ಎಪಿಎಂಸಿಯಲ್ಲಿ ಉತ್ತಮ ದರ ಸಿಗುತ್ತಿದ್ದರೆ, ಶೋಷಣೆ ಇಲ್ಲದಿದ್ದರೆ ರೈತರು ಉತ್ಪನ್ನಗಳನ್ನು ಚರಂಡಿಗೆ ಸುರಿಯುವ ಸ್ಥಿತಿ ಬರುತ್ತಿತ್ತೇ, ಉತ್ತಮ ಬೆಲೆ ಸಿಕ್ಕಿದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೇ ಎಂದೂ ಅವರು ಕೇಳಿದರು. ರೈತರ ಆದಾಯ ದ್ವಿಗುಣ ಆಗಬಾರದೇ ಎಂದು ಪ್ರಶ್ನಿಸಿದರು. ಸಿಎಎ, ಅಸಹಿಷ್ಣುತೆ ಮತ್ತಿತರ ವೇಷಧರಿಸಿ ಹೋರಾಟಗಳಲ್ಲಿ ವಿಫಲವಾದವರು ಪೂತನಿ ತರದಲ್ಲಿ ಹೊಸ ವೇಷ ಧರಿಸಿ ಬರುತ್ತಿದ್ದಾರೆ. ಹೋರಾಟಕ್ಕೆ ಬಂದವರಿಗೆ ಉಳುಮೆ ಮಾಡಲು ಬರುತ್ತದೆಯೇ, ಭೂಮಿತಾಯಿ ಸೇವೆ ಮಾಡುವ ರೈತರು ಮುಷ್ಕರದಲ್ಲಿ ಭಾಗವಹಿಸಿದ್ದರೇ ಎಂದು ಕೇಳಿದರು. ಇಂದು ಬಂದವರಲ್ಲಿ ಕೆಲವರು ಪೂರ್ವಗ್ರಹ ಪೀಡಿತರು, ಇನ್ನೂ ಕೆಲವರಿಗೆ ತಪ್ಪು ಮಾಹಿತಿ ಕೊಡಲಾಗಿದೆ ಎಂದು ಉತ್ತರಿಸಿದರು.

Submit Your Article