ಬೆಂಗಳೂರಿನಲ್ಲಿ(Bengaluru) ರೈತಪರ ಹೋರಾಟಗಾರ ರಾಕೇಶ್ ಟಿಕಾಯತ್(Rakesh Tikait) ಮೇಲೆ ಮೈಕ್ ನಿಂದ ಹಲ್ಲೆ ನಡೆಸಿ, ಮುಖಕ್ಕೆ ಕಪ್ಪು ಮಸಿ ಬಳಿದ ಆರೋಪದಡಿ ಭಾರತ್ ರಕ್ಷಣಾ ವೇದಿಕೆಯ(Bharath Rakshana Vedike) ರಾಜ್ಯ ಘಟಕದ ಅಧ್ಯಕ್ಷ ಭರತ್ ಶೆಟ್ಟಿ(Bharath Shetty) ಸೇರಿ ಇತರ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ನಗರದಲ್ಲಿ ಇಂದು ರೈತ ನಾಯಕ ಕೊಡಿಹಳ್ಳಿ ಚಂದ್ರಶೇಖರ್(Kodihalli Chandrashekhar) ಮೇಲೆ ಕೇಳಿ ಬಂದಿರುವ ಭ್ರಷ್ಟಾಚಾರ(Corruption) ಆರೋಪದ ಕುರಿತು ಚರ್ಚೆ ನಡೆಸಲು ರೈತಪರ ಸಂಘಟನೆಗಳು ಸಭೆ ಆಯೋಜಿಸಿದ್ದವು. ಈ ಸಭೆಯಲ್ಲಿ ವೇದಿಕೆ ಮೇಲೆ ಕುಳಿತಿದ್ದ ರಾಕೇಶ್ ಟಿಕಾಯತ್ ಅವರ ಮೇಲೆ ಭರತ್ ಶೆಟ್ಟಿ ಮತ್ತು ಇತರರು ದಿಢೀರನೆ ದಾಳಿ ನಡೆಸಿದ್ದಾರೆ. ಈ ವೇಳೆ ಮಾರಾಮಾರಿ ನಡೆದಿದ್ದು, ಕುರ್ಚಿಗಳನ್ನು ತೆಗೆದುಕೊಂಡು ಪರಸ್ಪರರು ಬಡಿದಾಡಿಕೊಂಡಿದ್ದಾರೆ. ನಂತರ ಪೊಲೀಸರು ಭಾರತ್ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಭರತ್ ಶೆಟ್ಟ ಮತ್ತು ಇತರ ಇಬ್ಬರನ್ನು ಸ್ಥಳದಲ್ಲೇ ಬಂಧಿಸಿದ್ದಾರೆ.
ಬಂಧನದ ವೇಳೆ ಭರತ್ ಶೆಟ್ಟಿ “ಮೋದಿ ಜಿಂದಾಬಾದ್” ಎಂದು ಕೂಗುತ್ತಾ, ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ಪ್ರದರ್ಶಿಸಿದ್ದಾರೆ. ಸಭೆಯಲ್ಲಿ ದಾಂದಲೆ ನಡೆಸಿದ ಇನ್ನೂ ಕೆಲವರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇನ್ನು ರಾಕೇಶ್ ಟಿಕಾಯತ್ ಅವರ ಕೈಗಳಿಗೆ ಸಣ್ಣ ಗಾಯಗಳಾಗಿದ್ದು ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ” ಅವರು ಮೈಕ್ ನಿಂದ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದರು. ಆಗ ನಾನು ನನ್ನ ಕೈಗಳನ್ನು ಅಡ್ಡ ತಂದಿದ್ದರಿಂದ ಕೈಗಳಿಗೆ ಗಾಯಗಳಾಗಿವೆ.
ಕೈ ಅಡ್ಡ ತರದಿದ್ದರೆ, ನನ್ನ ಕುತ್ತಿಗೆ ಮೇಲೆ ಏಟು ಬೀಳುತ್ತಿತ್ತು, ಮುಂದೆ ನನಗೆ ಏನಾಗುತ್ತಿತ್ತೋ” ಎಂದು ರಾಕೇಶ್ ಟಿಕಾಯತ್ ಆತಂಕ ವ್ಯಕ್ತಪಡಿಸಿದ್ದಾರೆ.