ರಾಯಪುರ ಸೆ 7 : ಬ್ರಾಹ್ಮಣರು ವಿದೇಶಿಗರು ಅವರನ್ನು ಹತ್ತಿರ ಸೇರಿಸಬೇಡಿ ಅವರನ್ನು ಬಹಿಷ್ಕರಿಸಿ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದ ಚತ್ತೀಸ್ಗಢ ಸಿಎಂ ಭೂಪೇಶ್ ಬಾಘೇಲ್ ಅವರ ತಂದೆ ನಂದಕುಮಾರ್ ಬಾಘೇಲ್ರನ್ನು ರಾಯಪುರ ಪೊಲೀಸರು ಬಂಧಿಸಿದ್ದಾರೆ.
ವಿದೇಶಿಗರಾದ ಬ್ರಾಹ್ಮಣರನ್ನು ಬಹಿಷ್ಕರಿಸಬೇಕು, ಬ್ರಾಹ್ಮಣರನ್ನು ಗ್ರಾಮಗಳಿಗೆ ಬಿಟ್ಟುಕೊಳ್ಳಬಾರದು ಅಲ್ಲದೆ ಅವರನ್ನು ದೇಶದಿಂದಲೇ ಹೊರಹಾಕಬೇಕೆಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ನಂದ ಕುಮಾರ್ ಅವರ ವಿಡಿಯೋ ವೈರಲ್ ಆಗಿದ್ದು ಈ ಹಿನ್ನಲೆಯಲ್ಲಿ ಸರ್ವ ಬ್ರಾಹ್ಮಿಣ್ ಸಮಾಜ, ದೀನ್ ದಯಾಳ್ ವಿಪ್ರ ಸಮಾಜಗಳು ರಾಯಪುರ ಪೊಲೀಸರಿಗೆ ದೂರು ನೀಡಿದ್ದವು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಂದು ನಂದಕುಮಾರ್ ಅವರನ್ನು ದೆಹಲಿಯಲ್ಲಿ ಬಂಧಿಸಿ,ರಾಯ್ಪುರ ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ಈ ಬಗ್ಗೆ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, ಸೆಪ್ಟೆಂಬರ್ 21ರವರೆಗೆ ನಂದಕುಮಾರ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಭೂಪೇಶ್ ಬಾಘೇಲ್ ರಾಜ್ಯದಲ್ಲಿ ಸಮುದಾಯಗಳ ನಡುವೆ ಸಾಮರಸ್ಯ ಕಾಪಾಡುವ ಜವಾಬ್ದಾರಿ ನನ್ನ ಮೇಲಿದೆ. ಅಂಥದ್ದರಲ್ಲಿ ನನ್ನ ತಂದೆಯೇ ಹೀಗೆ ಹೇಳಿದ್ದು ತಪ್ಪು. ಖಂಡಿತ ಹೆಚ್ಚಿನ ತನಿಖೆ ನಡೆಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.