ಬೆಂಗಳೂರು, ಮೇ. 01: ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ರ ವಾರಾಂತ್ಯ ಶೋನಲ್ಲಿ ನಟ ಕಿಚ್ಚು ಸುದೀಪ್ ಪಾಲ್ಗೊಳ್ಳುವ ನಿರೀಕ್ಷೆ ನಡುವೆಯೇ ಬಿಗ್ ಬಾಸ್ ಮನೆಯಿಂದ ಒಂದು ಕಹಿ ಸುದ್ದಿ ಹೊರ ಬಿದ್ದಿದೆ.
ಅನಾರೋಗ್ಯದ ಕಾರಣದಿಂದ ಕಳೆದ ಎರಡು ವಾರಗಳಿಂದ ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡಲಿಲ್ಲ. ನಟ ಸುದೀಪ್ ಇಲ್ಲದೆಯೇ ಎರಡು ವಾರಾಂತ್ಯಗಳ ಸಂಚಿಕೆಗಳು ಪ್ರಸಾರವಾದವು. ಆದರೆ ಇತ್ತೀಚೆಗೆ ಸುದೀಪ್ ತಾನು ಆರೋಗ್ಯವಾಗಿದ್ದು, ಈ ವಾರ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು.
ಆದರೆ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ನಡೆಯಬೇಕಿದ್ದ ವೀಕೆಂಡ್ ಷೋಗಳ ಚಿತ್ರೀಕರಣ ನಡೆಸದಿರಲು ಕಲರ್ಸ್ ಕನ್ನಡ ತೀರ್ಮಾನಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕಲರ್ಸ್ ವಾಹಿನಿ, ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ ನಾಳೆ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ ಎಂದು ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟ ಸುದೀಪ್, ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚು ಜನರು ಸರಿಯಲ್ಲ ಅನ್ನೋ ಕಾರಣದಿಂದ ಚಿತ್ರೀಕರಣ ರದ್ದು ಮಾಡಲಾಗಿದೆ. ಜನರಿಗೆ ಆಗುವ ನಿರಾಸೆ ಏನೆಂದು ತಿಳಿದಿದೆ, ಆದರೆ ನಾವು ನಿಯಮಗಳನ್ನು ಬೆಂಬಲಿಸಬೇಕಿದೆ. ಎಲ್ಲವೂ ಒಳ್ಳೆಯದಾಗುವ ನಿರೀಕ್ಷೆಯೊಂದಿಗೆ ಆದಷ್ಟು ಬೇಗ ವಾರಾಂತ್ಯದ ಎಪಿಸೋಡ್ ಬರಲಿ ಎಂದು ಬಯಸುವುದಾಗಿ ತಿಳಿಸಿದ್ದಾರೆ.
Cancelled coz even if its few members gathering ,,,it isn't supporting th current situation.. I understand viewers disappointments ,,but I'm sure we all agree tat we need to support the rules laid. Let's hope fo the best n hopefully we can be bk wth weekend episodes asap ??? L&H https://t.co/76uzSOEytc
— Kichcha Sudeepa (@KicchaSudeep) May 1, 2021