ಹಿಂದೂಗಳ ದೇವಸ್ಥಾನಗಳ ಮುಂದೆ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡುವುದಕ್ಕೆ ಹಿಂದೂ ಸಂಘಟನೆಗಳು ವಿರೋಧಿಸುತ್ತಿದ್ದು, ಇದೀಗ ಬಿಜೆಪಿ ಶಾಸಕ(BJP MLA) ಅರವಿಂದ ಬೆಲ್ಲದ(Aravind Bellad) ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ. ದೇವಸ್ಥಾನಗಳ ಮುಂದೆ ದೊಡ್ಡ ಟೋಪಿ ಹಾಕಿಕೊಂಡು, ಗಡ್ಡ ಬಿಟ್ಟು, ಮೀಸೆ ಬೋಳಿಸಿ, ಪೈಜಾಮಾ ತೊಟ್ಟುಕೊಂಡು ಕುಳಿತರೆ ಹಿಂದೂಗಳಿಗೆ ಏನೆನಿಸಬೇಡ? ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಪ್ರಶ್ನಿಸಿದ್ದಾರೆ.

ಶ್ರೀರಾಮ ಸೇನೆಯ(Sriram Sena) ಕಾರ್ಯಕರ್ತರು ಇತ್ತೀಚೆಗೆ ಧಾರವಾಡದ(Dharwad) ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡುತ್ತಿದ್ದ, ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ಅಂಗಡಿಯನ್ನು ಧ್ವಂಸ ಮಾಡಿದ್ದರು. ಹೀಗಾಗಿ ಸೋಮುವಾರ ಸ್ಥಳಕ್ಕೆ ಭೇಟಿ ನೀಡಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಮರು ಈಗ ದೇವಸ್ಥಾನಗಳ ಆವರಣಕ್ಕೆ ಬಂದಿದ್ದಾರೆ. ಹೀಗೆ ಬಿಟ್ಟರೆ ಮುಂದೆ ದೇವಸ್ಥಾನಗಳ ಒಳಗೆ ಬರುತ್ತಾರೆ ಎಂಬ ಭಾವನೆ ಹಿಂದೂಗಳ ಮನದಲ್ಲಿ ಮೂಡಲಿದೆ.
ಇಂಥ ಘಟನೆಗಳು ಮರುಕಳಿಸಬಾರದು ಎಂದರೆ, ಮೂಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಅದೇ ರೀತಿ ಈ ರೀತಿಯ ಸಮಸ್ಯೆಗಳ ಸೃಷ್ಟಿಗೆ ಕಾರಣ ಯಾರು ಎಂಬುದನ್ನು ಮನಗಾಣಬೇಕಿದೆ ಎಂದರು. ಇನ್ನು ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ನೀಡಿದಾಗ ಇಡೀ ಮುಸ್ಲಿಂ ಸಮುದಾಯ ಒಂದಾಗಿ ವ್ಯಾಪಾರ ಬಂದ್ ಮಾಡಿ ಪ್ರತಿಭಟಿಸಿತು. ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಎಲ್ಲೆಡೆ ಮುಸ್ಲಿಂ ವ್ಯಾಪಾರಿಗಳನ್ನು ಇದೀಗ ಬಹಿಷ್ಕರಿಸಲಾಗುತ್ತಿದೆ.
ಇನ್ನು ಕಲ್ಲಂಗಡಿ ಒಡೆದಾಗ ಆಗುವ ಕಳವಳ, ತಲೆ ಒಡೆದಾಗಲೂ ಆಗಲಿ ಎಂದು ಶಾಸಕ ಸಿಟಿ ರವಿ ನೀಡಿರುವ ಹೇಳಿಕೆ ಸರಿಯಾಗಿಯೇ ಇದೆ ಎಂದರು. ಇನ್ನು ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಅಂಜುಮನ್ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಪರ್ಯಾಯಸ್ಥರೊಂದಿಗೆ ಮಾತುಕತೆ ನಡೆಸಿದರು. ಪರ್ಯಾಯಸ್ಥ ನರಸಿಂಹ ದೇಸಾಯಿ ಮಾತನಾಡಿ, ಉಳಿದ 12 ಪರ್ಯಾಯಸ್ಥರೊಂದಿಗೆ ಸಭೆ ನಡೆಸಿ ಮುಸ್ಲಿಂ ವ್ಯಾಪಾರಿಗಳಿಗೆ ಅನುಮತಿ ನೀಡುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.